ಸಚಿನ್ ಪೈಲಟ್ ಗೆ ರಾಜಕೀಯ ಭವಿಷ್ಯ ಇರೋದು ಕಾಂಗ್ರೆಸ್ ನಲ್ಲಿ ಮಾತ್ರ : ಮೊಯ್ಲಿ
ಬೆಂಗಳೂರು : ಕೆಲ ದಿನಗಳಿಂದ ರಾಜಸ್ಥಾನ ಕಾಂಗ್ರೆಸ್ ನಲ್ಲಿ ನಡೆಯುತ್ತಿರೋ ಹೈಡ್ರಾಮಾದ ಬಗ್ಗೆ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪ್ರತಿಕ್ರಿಯೆ ನೀಡಿದ್ದು, ಸಚಿನ್ ಪೈಲಟ್ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ಇರುವುದು ಕಾಂಗ್ರೆಸ್ಸಿನಲ್ಲಿ ಮಾತ್ರ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ರಾಜಸ್ಥಾನ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಅವರು, ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷದಲ್ಲಿ ಇರುವಾಗಲೇ ಎಲ್ಲವನ್ನೂ ಸಾಧಿಸಿದ್ದಾರೆ. ಕಾಂಗ್ರೆಸ್ ನಲ್ಲಿದ್ದುಕೊಂಡೇ ಸಂಸದ, ಕೇಂದ್ರ ಸಚಿವ, ಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಕೂಡ ಆಗಿದ್ದಾರೆ. ಹೀಗಾಗಿ ಅವರಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಪಕ್ಷದೊಳಗಡೆಯೇ ಮಾತುಕತೆ ನಡೆಸಿ ಪರಿಹರಿಸಬಹುದಾಗಿತ್ತು. ಅದಕ್ಕಾಗಿ ಇಷ್ಟೊಂದು ಆತುರ ಪಡುವ ಅವಶ್ಯಕತೆ ಇರಲಿಲ್ಲ ಎಂದು ಸಚಿನ್ ನಡೆಗೆ ಬೇಸರ ಹೊರಹಾಕಿದರು.
ಇನ್ನು ಸಚಿನ್ ಪೈಲಟ್ ಇಂದು ಏನು ಸಾಧಿಸಿದ್ದಾರೆಯೋ ಅದು ಕಾಂಗ್ರೆಸ್ಸಿನಲ್ಲಿದ್ದುಕೊಂಡೇ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ. ಅಲ್ಲದೆ ಮೊದಲು ಅದನ್ನು ಅವರು ಅರಿತುಕೊಳ್ಳಲಿ ಎಂದು ಹೇಳಿದ ಮೊಯ್ಲಿ, ಸಚಿನ್ ಅವರು ನಾನು ಬಿಜೆಪಿ ಸೇರಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಬಿಜೆಪಿಗೆ ಸೇರಲ್ಲ ಎಂದಿರೋದು ತುಂಬಾ ಒಳ್ಳೆಯ ನಿರ್ಧಾರ ಎಂದಿದ್ದಾರೆ.








