ಲೋಕಸಭೆಯಲ್ಲಿ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಯಾವುದೇ ಸಚಿವರು 30 ದಿನಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರೆ ಅವರನ್ನು ಸ್ವಯಂಪ್ರೇರಿತವಾಗಿ ಪದಚ್ಯುತಿಗೊಳಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಸ ಮಸೂದೆಯನ್ನು ಮಂಡಿಸಿದರು.
ಈ ವೇಳೆ ವಿಪಕ್ಷಗಳು ಜೋರಾಗಿ ಪ್ರತಿರೋಧ ವ್ಯಕ್ತಪಡಿಸಿ, ಸಂವಿಧಾನ ಮುರಿಯಬೇಡಿ ಎಂದು ಘೋಷಣೆ ಕೂಗಿದರು. ಇದರಿಂದ ಸದನ ಗದ್ದಲದಿಂದ ಕೂಡಿತು.
ಅಮಿತ್ ಶಾ ತಿರುಗೇಟು
ವಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ,
ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದಾಗ ನಾನು ತಕ್ಷಣ ರಾಜೀನಾಮೆ ನೀಡಿದ್ದೆ. ಕೋರ್ಟ್ ನನ್ನನ್ನು ಖುಲಾಸೆಗೊಳಿಸುವವರೆಗೂ ನಾನು ಹುದ್ದೆಯಲ್ಲಿ ಮುಂದುವರಿಯಲಿಲ್ಲ. ಆದ್ದರಿಂದ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಹಕ್ಕು ನಿಮಗೆ ಇಲ್ಲ ಎಂದು ಗರಂ ಆಗಿ ಹೇಳಿದರು.
ವಿಪಕ್ಷ ನಾಯಕರಾದ ವೇಣುಗೋಪಾಲ್ ಈ ಮಸೂದೆ ವಿರುದ್ಧವಾಗಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಚುನಾಯಿತ ಪ್ರತಿನಿಧಿಗಳನ್ನು ಜನರ ತೀರ್ಪಿನ ಆಧಾರದ ಮೇಲೆ ಮಾತ್ರ ತೆಗೆದುಹಾಕಬೇಕು. ನ್ಯಾಯಾಲಯದ ವಿಚಾರಣೆ ಮುಗಿಯುವ ಮುನ್ನವೇ ಹುದ್ದೆ ಕಳೆದುಕೊಳ್ಳುವುದು ಸಂವಿಧಾನ ವಿರೋಧಿ ಎಂದು ಆಕ್ರೋಶಗೊಂಡರು.
ಇದಕ್ಕೆ ಅಮಿತ್ ಶಾ ತೀವ್ರ ಪ್ರತಿಕ್ರಿಯೆ ನೀಡಿ, ಜನರಿಗೆ ನಂಬಿಕೆ ಮೂಡಿಸಲು, ರಾಜಕೀಯದಲ್ಲಿ ಪಾರದರ್ಶಕತೆ ತರಲು ಈ ಮಸೂದೆ ಅಗತ್ಯ. ಭ್ರಷ್ಟಾಚಾರ ಅಥವಾ ಗಂಭೀರ ಪ್ರಕರಣಗಳಲ್ಲಿ ಸಿಕ್ಕಿಬಿದ್ದವರು ಹುದ್ದೆಯಲ್ಲಿದ್ದರೆ ಜನರ ವಿಶ್ವಾಸ ಕುಸಿಯುತ್ತದೆ ಎಂದು ತಿರುಗೇಟು ನೀಡಿದರು.
ಇಬ್ಬರ ಮಾತಿನ ಯುದ್ಧದಿಂದಾಗಿ ಲೋಕಸಭೆ ಕೆಲಕಾಲ ರಣಾಂಗಣದಂತಾಗಿತ್ತು. ವಿಪಕ್ಷ-ಆಡಳಿತಪಕ್ಷಗಳ ನಡುವೆ ಘರ್ಷಣೆಯ ವಾತಾವರಣ ನಿರ್ಮಾಣವಾಗಿದ್ದು, ಸ್ಪೀಕರ್ ಹಲವು ಬಾರಿ ಶಾಂತತೆ ಕಾಪಾಡುವಂತೆ ಮನವಿ ಮಾಡಬೇಕಾಯಿತು.
ಈ ಮಸೂದೆ ಅಂಗೀಕೃತವಾದರೆ, ಯಾವುದೇ ಆಯ್ಕೆಯಾದ ಜನಪ್ರತಿನಿಧಿಗಳು 30 ದಿನಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿ ಇದ್ದರೆ ಅವರು ತಮ್ಮ ಹುದ್ದೆಯಿಂದ ಕಡ್ಡಾಯವಾಗಿ ಹೊರಗುಳಿಯಬೇಕಾಗುತ್ತದೆ. ಇದರ ರಾಜಕೀಯ ಪರಿಣಾಮ ದೊಡ್ಡ ಮಟ್ಟದಲ್ಲಿ ಬೀರುವ ಸಾಧ್ಯತೆಯಿದೆ.








