ಹಿಂದಿ ಚಿತ್ರರಂಗದ ದಿಗ್ಗಜ ನಟ ಧರ್ಮೇಂದ್ರ (90) ಅವರ ಆರೋಗ್ಯದಲ್ಲಿ ಮತ್ತೊಮ್ಮೆ ಏರುಪೇರು ಕಂಡುಬಂದಿದ್ದು, ಅವರನ್ನು ತುರ್ತು ಆಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ವೆಂಟಿಲೇಟರ್‌ನಲ್ಲಿದ್ದು, ವೈದ್ಯರ ಕಟ್ಟು ನಿಟ್ಟಿನ ನಿಗಾದಲ್ಲಿದ್ದಾರೆ. ವಯೋಸಹಜ ಸಮಸ್ಯೆಗಳ ಕಾರಣ ಕಳೆದ ಕೆಲವು ತಿಂಗಳಿಂದಲೇ ಅವರ ಆರೋಗ್ಯದಲ್ಲಿ ಬದಲಾವಣೆ ಕಾಣಿಸಿಕೊಂಡಿತ್ತು.
ಧರ್ಮೇಂದ್ರ ಅವರ ಸ್ಥಿತಿ ಆಸ್ಪತ್ರೆಯಲ್ಲಿ ಗಂಭೀರವಾಗಿರುವ ಮಾಹಿತಿ ಹೊರಬಿದ್ದ ನಂತರ, ದೇಶದಾದ್ಯಂತ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಹಲವರು ಸಾಮಾಜಿಕ ಜಾಲತಾಣದಲ್ಲಿ ಅವರ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದು, ನಟನ ಜೀವನಕ್ಕೆ ಗೌರವ ಸಲ್ಲಿಸುತ್ತಿದ್ದಾರೆ.
ಆರು ದಶಕಗಳಿಗಿಂತ ಹೆಚ್ಚು ಕಾಲ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಕಟ್ಟಿಕೊಂಡಿರುವ ಧರ್ಮೇಂದ್ರ, 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1973ರಲ್ಲಿ ಒಟ್ಟಾರೆ 8 ಹಿಟ್ ಚಿತ್ರಗಳನ್ನು ಮತ್ತು 1987ರಲ್ಲಿ ಸತತ 7 ಹಿಟ್ ಸಿನಿಮಾಗಳನ್ನು ನೀಡಿದ್ದು, ಇದು ಬಾಲಿವುಡ್‌ನಲ್ಲಿ ದಾಖಲೆಯಾಗಿ ಉಳಿದಿದೆ. ಅವರ ‘ಶೋಲೇ’, ‘ಜುಗನು’, ‘ಯಾದೋನ್ ಕಿ ಬಾರಾತ್’, ‘ಧರ್ಮ್ ವಿರ’, ‘ಚುಪ್ಪ್ಕೆ ಚುಪ್ಪ್ಕೆ’ ಮುಂತಾದ ಸಿನೆಮಾಗಳು ಇಂದಿಗೂ ಜನಮನ ಸೆಳೆಯುತ್ತಿವೆ.
ನಟನ ವಯಸ್ಸು, ಆರೋಗ್ಯ ಸಮಸ್ಯೆ, ಮತ್ತು ಅಭಿಮಾನಿಗಳ ಪ್ರಾರ್ಥನೆಗಳು ಸೇರಿ ದೇಶದ ಸಿನಿಮಾ ವಲಯದಲ್ಲೇ ಚರ್ಚೆಯ ವಿಷಯವಾಗಿದೆ. ಆರೋಗ್ಯ ಸ್ಥಿತಿ ಬಗ್ಗೆ ಕುಟುಂಬದವರು ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.








