ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದೆ. ಆರು ದಶಕಗಳ ಸುದೀರ್ಘ ಅವಧಿಯಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂ, ಹಾಸ್ಯಪ್ರಜ್ಞೆ ಮತ್ತು ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿದ್ದ ಹಿರಿಯ ನಟ ಉಮೇಶ್ ಅವರು ಇಹಲೋಕ ತ್ಯಜಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಸೀತಾಪತಿ ಪಾತ್ರದ ಮೂಲಕ ಅಜರಾಮರ
ಸುಮಾರು 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಉಮೇಶ್ ಅವರು, ಅನಂತ್ ನಾಗ್ ಅಭಿನಯದ ಗೋಲ್ಮಾಲ್ ರಾಧಾಕೃಷ್ಣ (1990) ಚಿತ್ರದಲ್ಲಿನ ಸೀತಾಪತಿ ಪಾತ್ರದ ಮೂಲಕ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಆ ಚಿತ್ರದಲ್ಲಿ ಅವರು ಹೇಳುವ ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎಂಬ ಐಕಾನಿಕ್ ಡೈಲಾಗ್ ಮತ್ತು ಅವರ ಮುಖಭಾವ ಇಂದಿಗೂ ಮೀಮ್‌ಗಳ ಮೂಲಕ, ಹಾಸ್ಯ ಪ್ರಸಂಗಗಳ ಮೂಲಕ ಜನಪ್ರಿಯವಾಗಿದೆ. ಗುರು ಶಿಷ್ಯರು ಚಿತ್ರದ ಐವರು ಶಿಷ್ಯರಲ್ಲಿ ಒಬ್ಬರಾಗಿ, ಇತ್ತೀಚಿನ ವೆಂಕಟ ಇನ್ ಸಂಕಟ ಚಿತ್ರದವರೆಗೂ ಅವರು ಪ್ರೇಕ್ಷಕರನ್ನು ನಗಿಸುತ್ತಲೇ ಬಂದಿದ್ದರು.
ತೊಟ್ಟಿಲು ಕೂಸಿನಿಂದ ರಂಗಭೂಮಿಯವರೆಗೆ
ಏಪ್ರಿಲ್ 22, 1945 ರಂದು ಮೈಸೂರಿನಲ್ಲಿ ಜನಿಸಿದ ಉಮೇಶ್ ಅವರಿಗೆ ಕಲೆ ರಕ್ತಗತವಾಗಿತ್ತು. ತಂದೆ ಎ.ಎಲ್. ಶ್ರೀಕಂಠಯ್ಯ ಮತ್ತು ತಾಯಿ ನಂಜಮ್ಮ. ವಿಶೇಷವೆಂದರೆ ಉಮೇಶ್ ಅವರು ತೊಟ್ಟಿಲು ಕೂಸಾಗಿದ್ದಾಗಲೇ ರಂಗಪ್ರವೇಶ ಮಾಡಿದ್ದರು. ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ ಬಾಲನಟನಾಗಿ ಬೆಳೆದ ಅವರು, ವೀರಣ್ಣನವರಿಂದಲೇ ರಂಗ ಶಿಕ್ಷಣ ಮತ್ತು ಅಭಿನಯವನ್ನು ಕಲಿತರು. ದಶಾವತಾರ ನಾಟಕದಲ್ಲಿನ ಇವರ ಪ್ರಹ್ಲಾದನ ಪಾತ್ರವನ್ನು ಮೆಚ್ಚಿ ಸಾಹಿತ್ಯ ದಿಗ್ಗಜ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಅಂದಿನ ಕಾಲದಲ್ಲೇ 10 ರೂಪಾಯಿ ಬಹುಮಾನ ನೀಡಿದ್ದು ಅವರ ಪ್ರತಿಭೆಗೆ ಸಾಕ್ಷಿ.
ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಪ್ರತಿಭೆ
ಉಮೇಶ್ ಅವರ ಸಿನಿಮಾ ಬದುಕಿಗೆ ದೊಡ್ಡ ತಿರುವು ಸಿಕ್ಕಿದ್ದು ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಂದ. ಬಿ.ಆರ್. ಪಂತುಲು ಅವರ ಸಹಾಯಕರಾಗಿದ್ದ ಪುಟ್ಟಣ್ಣ ಅವರು, 1960ರಲ್ಲಿ ಮಕ್ಕಳ ರಾಜ್ಯ ಚಿತ್ರಕ್ಕಾಗಿ ಉಮೇಶ್ ಅವರನ್ನು ಆಯ್ಕೆ ಮಾಡಿದರು. ಮುಂದೆ 1974ರಲ್ಲಿ ತೆರೆಕಂಡ ಕಥಾ ಸಂಗಮ ಚಿತ್ರದ ತಿಮ್ಮರಾಯಿ ಪಾತ್ರ ಉಮೇಶ್ ಅವರ ವೃತ್ತಿಜೀವನದ ಮೈಲಿಗಲ್ಲಾಯಿತು. ಈ ಪಾತ್ರಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು.
ಬಹುಮುಖ ಪ್ರತಿಭೆ
ಉಮೇಶ್ ಕೇವಲ ನಟರಷ್ಟೇ ಆಗಿರಲಿಲ್ಲ. ಅವರೊಬ್ಬ ಉತ್ತಮ ಪಿಯಾನೋ ಹಾಗೂ ಹಾರ್ಮೋನಿಯಂ ವಾದಕರೂ ಆಗಿದ್ದರು. ಹಲವಾರು ನಾಟಕ ಕಂಪನಿಗಳಲ್ಲಿ ವಾದಕರಾಗಿ ಸೇವೆ ಸಲ್ಲಿಸಿದ್ದರು. ಇದರೊಂದಿಗೆ ಉತ್ತಮ ಬರಹಗಾರರಾಗಿದ್ದ ಅವರು, ಅಮ್ಮಾವರ ಆಜ್ಞೆ, ಎಲ್ಲರೂ ನಮ್ಮವರೇ ಎಂಬ ನಾಟಕಗಳನ್ನು ರಚಿಸಿದ್ದರು. ಬಣ್ಣದ ಘಂಟೆ ಎಂಬ ಆತ್ಮಚರಿತ್ರೆಯನ್ನೂ ಬರೆದಿದ್ದರು. ಕಿರುತೆರೆಯಲ್ಲಿ ಜೋಕ್ಸ್ ಫಾಲ್ಸ್, ಗಲಿಬಿಲಿ ಸಂಸಾರ ಮುಂತಾದ ಜನಪ್ರಿಯ ಕಾರ್ಯಕ್ರಮಗಳಿಗೆ ನಿರ್ದೇಶನ ಮತ್ತು ಸಾಹಿತ್ಯವನ್ನೂ ಒದಗಿಸಿದ್ದರು.
ಪ್ರಶಸ್ತಿಗಳ ಗರಿ
ಉಮೇಶ್ ಅವರ ಐದು ದಶಕಗಳ ಸೇವೆಗೆ ಹಲವಾರು ಗೌರವಗಳು ಸಂದಿವೆ. ರಾಜ್ಯ ಚಲನಚಿತ್ರ ಪ್ರಶಸ್ತಿ, 1994ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ, ಮಹಾನಗರ ಪಾಲಿಕೆ ಪ್ರಶಸ್ತಿ ಹಾಗೂ ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಅವರು ಪಾತ್ರರಾಗಿದ್ದರು.
ಹಾಸ್ಯದ ಮೂಲಕ ನೋವು ಮರೆಸುತ್ತಿದ್ದ ಕಲಾವಿದ, ಇಂದು ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿ ನಿರ್ಗಮಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇಡೀ ಕರುನಾಡು ಪ್ರಾರ್ಥಿಸುತ್ತಿದೆ.








