ಪೂರ್ಣ ಪ್ರಜ್ಞಾ ಸ್ಥಿತಿಗೆ ಮರಳಿದ ಹಿರಿಯ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ
ಚೆನ್ನೈ, ಸೆಪ್ಟೆಂಬರ್01: ಆಗಸ್ಟ್ 5 ರಂದು ಕೋವಿಡ್ 19 ಸೋಂಕಿಗೆ ಒಳಗಾಗಿ ನಗರದ ಎಂ.ಜಿ.ಎಂ. ಹೆಲ್ತ್ ಕೇರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಹುಭಾಷಾ ಗಾಯಕ ಮತ್ತು ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಾಲಸುಬ್ರಹ್ಮಣ್ಯಂ ಅವರು ಇನ್ನೂ ವೆಂಟಿಲೇಟರ್ ಮತ್ತು ECMO ವ್ಯವಸ್ಥೆಯ ನಿಗಾದಲ್ಲೇ ಇದ್ದು ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರ ತಂಡ ನಿಕಟವಾಗಿ ಗಮನಿಸುತ್ತಿದೆ ಎಂದು ಎಂ.ಜಿ.ಎಂ. ಹೆಲ್ತ್ ಕೇರ್ ಆಸ್ಪತ್ರೆ ಬಿಡುಗಡೆ ಮಾಡಿರುವ ಇತ್ತೀಚಿನ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.
ಎಸ್.ಪಿ.ಬಿ. ಅವರು ಪೂರ್ಣ ಪ್ರಜ್ಞಾ ಸ್ಥಿತಿಗೆ ಮರಳಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಮಾತ್ರವಲ್ಲದೆ ಪಿಸಿಯೋಥೆರಪಿ ಚಟುವಟಿಕೆಗೂ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಬುಲೆಟಿನ್ ನಲ್ಲಿ ತಿಳಿಸಲಾಗಿದೆ
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಪುತ್ರ ಚರಣ್ ಸಹ ತಮ್ಮ ತಂದೆಯ ಆರೋಗ್ಯ ಸ್ಥಿತಿಯ ಕುರಿತಾಗಿ ಮಾಹಿತಿ ನೀಡಿದ್ದು, ತಂದೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.
ನನ್ನ ತಂದೆಯವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಚಿಕಿತ್ಸೆಗೆ ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರು
ಈ ಪರಿಸ್ಥಿತಿಯಿಂದ ಬೇಗನೇ ಹೊರಬರುತ್ತಾರೆ ಎಂಬ ಭರವಸೆ ನನಗಿದೆ. ಇದಕ್ಕೆಲ್ಲಾ ನಿಮ್ಮ ಪ್ರಾರ್ಥನೆ, ಹಾರೈಕೆಗಳು ಕಾರಣ ಎಂದು ಚರಣ್ ತಿಳಿಸಿದ್ದಾರೆ