ರಾಮ ಮಂದಿರ ಭೂಮಿ ಪೂಜಾದಂದು ತಮ್ಮ ಮನೆಗಳಲ್ಲಿ ಶ್ರೀ ರಾಮನನ್ನು ಪೂಜಿಸಲು ವಿಎಚ್ಪಿ ಕರೆ
ಹೊಸದಿಲ್ಲಿ, ಜುಲೈ 31: ರಾಮ ಮಂದಿರ ನಿರ್ಮಾಣದ ‘ಭೂಮಿ ಪೂಜಾ’ ಸಮಾರಂಭದಂದು ಜನರು (ರಾಮಭಕ್ತರು) ತಮ್ಮ ಮನೆ, ಸಂಸ್ಥೆ, ಮಠ, ಆಶ್ರಮ ಇತ್ಯಾದಿಗಳಲ್ಲಿ ಭಜನೆ-ಕೀರ್ತನ ನಡೆಸಿ, ಭಗವಾನ್ ಶ್ರೀ ರಾಮನನ್ನು ಪೂಜಿಸಿ ಮತ್ತು ಆರತಿಯ ನಂತರ ಪ್ರಸಾದವನ್ನು ವಿತರಿಸಿ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಜನರಿಗೆ ಮನವಿ ಮಾಡಿದೆ.
ಜನರು ತಮ್ಮ ಮನೆ, ನೆರೆಹೊರೆ, ಗ್ರಾಮಗಳು, ಮಾರುಕಟ್ಟೆಗಳು, ಮಠಗಳು, ಗುರುದ್ವಾರಗಳು, ಆಶ್ರಮಗಳು ಇತ್ಯಾದಿಗಳನ್ನು ಸಂಜೆ ದೀಪಗಳಿಂದ ಅಲಂಕರಿಸುವುದರ ಜೊತೆಗೆ ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜಾ ಸಮಾರಂಭದ ಲೈವ್ ಕಾರ್ಯಕ್ರಮವನ್ನು ವೀಕ್ಷಿಸಿ, ಜೊತೆಗೆ ಸಮಾಜದ ಇತರರಿಗೆ ತೋರಿಸಲು ವ್ಯವಸ್ಥೆ ಮಾಡಬೇಕು ಎಂದು ವಿಎಚ್ಪಿ ತಿಳಿಸಿದೆ.
ರಾಮ ದೇವಾಲಯದ ನಿರ್ಮಾಣಕ್ಕಾಗಿ ದೇಣಿಗೆ ನೀಡುವ ಪ್ರತಿಜ್ಞೆ ಮಾಡುವಂತೆ ಜನರನ್ನು ಕೋರಲಾಗಿದ್ದು, ಅವರು ಹೆಚ್ಚು ಪ್ರಚಾರದ ವಿಧಾನಗಳನ್ನು ಬಳಸಿಕೊಂಡು ಈ ಸಂದರ್ಭಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಭಾಗವಹಿಸಲು ಹೆಚ್ಚು ಹೆಚ್ಚು ಜನರಿಗೆ ಅನುಕೂಲಮಾಡಬೇಕು ಎಂದು ಹೇಳಿದೆ. ಆದಾಗ್ಯೂ, ಈ ಸಂದರ್ಭವನ್ನು ಆಚರಿಸುವಾಗ ಕೊರೋನವೈರಸ್ ಮಾರ್ಗಸೂಚಿಗಳನ್ನು ಸಹ ಅನುಸರಿಸುವಂತೆ ವಿಎಚ್ಪಿ ಜನರನ್ನು ಕೇಳಿದೆ.
ಕೇಂದ್ರದಿಂದ ನೇಮಕಗೊಂಡ ದೇವಾಲಯದ ಟ್ರಸ್ಟ್ ಕೂಡ ನಿರ್ಮಾಣ ಕಾರ್ಯಗಳಿಗಾಗಿ ಆಭರಣಗಳ ಬದಲು ಹಣವನ್ನು ದಾನ ಮಾಡುವಂತೆ ಮನವಿ ಮಾಡಿದೆ. ಕಳೆದ ನಾಲ್ಕು ತಿಂಗಳಲ್ಲಿ ಆನ್’ಲೈನ್ ದೇಣಿಗೆ ಮೂಲಕ, ಟ್ರಸ್ಟ್ ಅಯೋಧ್ಯೆಯ ಎಸ್’ಬಿಐ ಶಾಖೆಯಲ್ಲಿನ ಎರಡು ಬ್ಯಾಂಕ್ ಖಾತೆಗಳಲ್ಲಿ ಸುಮಾರು 6 ಕೋಟಿ ರೂಗಳು ಸಂಗ್ರಹವಾಗಿರುವುದಾಗಿ ಮೂಲಗಳು ತಿಳಿಸಿವೆ.
ಟ್ರಸ್ಟ್ ದೇಣಿಗೆಗಳ ಸ್ವೀಕೃತಿ ರಶೀದಿಗಳನ್ನು ಜೊತೆಗೆ ದಾನಿಗಳಿಗೆ ಮೆಚ್ಚುಗೆಯ ಪತ್ರವನ್ನು ಸಹ ಕಳುಹಿಸುತ್ತಿದೆ.
ಈ ಸಮಾರಂಭದಲ್ಲಿ ಕೊರೋನವೈರಸ್ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಮತ್ತು ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ಅಯೋಧ್ಯೆಯ ರಾಮ ದೇವಾಲಯದ ಭೂಮಿ ಪೂಜಾ ನಡೆಸಲಿದ್ದಾರೆ.