ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ನಲ್ಲಿ ಕದ್ದುಮುಚ್ಚಿ ಪ್ರೇಮಿಗಳ ವಿಡಿಯೋ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯ ತಲೆಗೆ ಅಪರಿಚಿತರು ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ. ಸುಧೀರ್ ಎಂಬಾತ ಹಲ್ಲೆಗೊಳಗಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದು ಮಧ್ಯಾಹ್ನದ ವೇಳೆ ಈ ಘಟನೆ ಸಂಭವಿಸಿದ್ದು, ಸುಧೀರ್ ಗುಪ್ತವಾಗಿ ಪ್ರೇಮಿಗಳ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದನಂತೆ. ಈ ವೇಳೆ ನಾಲ್ಕು ಜನರ ತಂಡ ಸುಧೀರ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದು, ಕಲ್ಲಿನಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಗಾಯಗೊಂಡ ಸುಧೀರ್ ಅವರನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.








