ಬೆಂಗಳೂರು: ಹಿರಿಯ ಸದನ ಎಂದೇ ಖ್ಯಾತವಾಗಿರುವ ರಾಜ್ಯ ವಿಧಾನಪರಿಷತ್ ಇಂದು ರಾಜ್ಯ ರಾಜಕೀಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಸಭಾಪತಿ ಹುದ್ದೆಗಾಗಿ ಭಾರಿ ಫೈಟ್‍ಗೆ ಸಾಕ್ಷಿಯಾಯಿತು.
ವಿಧಾನಪರಿಷತ್ ಕಲಾಪ ಆರಂಭಿಸಲು ಬೆಲ್ ಹಾಕಲಾಗಿತ್ತು. ನಿಯಮದ ಪ್ರಕಾರ ಬೆಲ್ ನಿಲ್ಲುವ ಮೊದಲೇ ಉಪಸಭಾಪತಿ ಧರ್ಮೇಗೌಡರನ್ನು ಬಿಜೆಪಿ ಸದಸ್ಯರು ಸಭಾಪತಿ ಪೀಠಕ್ಕೆ ತಂದು ಕೂರಿಸಿದ್ದೇ ಇಷ್ಟೇಲ್ಲಾ ರಾದ್ಧಾಂತಕ್ಕೆ ಕಾರಣವಾಯಿತು.
ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಕಳೆದ ವಾರ ಪರಿಷತ್ ಕಲಾಪ ದಿಢೀರ್ ಅನಿರ್ಧಿಷ್ಟಾವಧಿಗೆ ಮುಂದೂಡಿದ ಹಿನ್ನೆಲೆಯಲ್ಲಿ ಸಭಾಪತಿ ವಿರುದ್ಧ ಮತ್ತೆ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಇಂದು ಒಂದು ದಿನದ ವಿಶೇಷ ಅಧಿವೇಶನ ಕರೆದಿದೆ.
ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್‍ನಿಂದ ಸಭಾಪತಿ ಸ್ಥಾನಕ್ಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ರಣತಂತ್ರ ರೂಪಿಸಿತ್ತು. ಹೀಗಾಗಿ ಇಂದು ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅನುಮೋದನೆ ಪಡೆದು ಕಾಂಗ್ರೆಸ್‍ಗೆ ಟಕ್ಕರ್ ಕೊಡಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿತ್ತು.
ನಿಯಮದ ಪ್ರಕಾರ ಯಾವುದೇ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಅರ್ಜಿ ಸಲ್ಲಿಸಿದರೆ ಕಲಾಪ ಆರಂಭಿಸುವುದು ಸಭಾಪತಿಗಳೇ ಎನ್ನಲಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಹೀಗಾಗಿ ಕಲಾಪ ಮುಂದುವರೆಸುವಂತೆ ಉಪಸಭಾಪತಿಗಳನ್ನು ಕರೆದು ಸಭಾಪತಿ ಸ್ಥಾನ ಅಲಂಕರಿಸಲು ಸೂಚಿಸಲಾಗುತ್ತದೆ. ಆನಂತರ ಉಪಸಭಾಪತಿಗಳು ಕಲಾಪವನ್ನು ಮುನ್ನಡೆವುದು ನಿಯಮ.
ಆದರೆ, ಇಂದು ಆಗಿದ್ದೇ ಬೇರೆ. ವಿಧಾನಪರಿಷತ್ ಕಲಾಪ ಆರಂಭಕ್ಕೂ ಮುನ್ನ ಬೆಲ್ ಹಾಕಲಾಗಿತ್ತು. ಕೆಲವೇ ಕ್ಷಣಗಳಲ್ಲಿ ಸದನ ಆರಂಭವಾಗುತ್ತದೆ ಎಂಬುದನ್ನು ಸೂಚಿಸಲು ಬೆಲ್ ಹಾಕಲಾಗುತ್ತದೆ.
ಸದನ ಆರಂಭವಾಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಪಕ್ಷಗಳ ಸದಸ್ಯರು ಬಂದು ತಮ್ಮ ಆಸನಗಳಲ್ಲಿ ಕುಳಿತಿದ್ದರು. ಉಪಸಭಾಪತಿ ಧರ್ಮೇಗೌಡ ಕೂಡ ತಮ್ಮ ಸ್ಥಾನದಲ್ಲಿ ಕುಳಿತಿದ್ದರು. ಆದರೆ, ಬೆಲ್ ನಿಲ್ಲುವ ಮೊದಲೇ, ಮಾರ್ಷಲ್‍ಗಳು ಬಂದು ಸಭಾಪತಿಗಳು ಬರುತ್ತಾರೆಂದು ಹೇಳುವ ಮೊದಲೇ ಬಿಜೆಪಿ ಸದಸ್ಯರು ಸಭಾಪತಿ ಬರುವ ಬಾಗಿಲು ಬಂದ್ ಮಾಡಿ, ಸಭಾಪತಿ ಸ್ಥಾನಕ್ಕೆ ಉಪಸಭಾಪತಿ ಧರ್ಮೇಗೌಡರನ್ನು ತಂದು ಕೂರಿಸಿದರು. ಜತೆಗೆ ಸಭಾಪತಿ ಕೊಠಡಿಯಿಂದ ಪ್ರತಾಪ್ ಚಂದ್ರ ಶೆಟ್ಟಿ ಸದನ ಪ್ರವೇಶಿಸದಂತೆಯೂ ಬಿಜೆಪಿ ಸದಸ್ಯರು ಬಾಗಿಲು ಬಂದ್ ಮಾಡಿ ತಡೆದಿದ್ದರು.
ದಿಢೀರ್ ಆದ ಈ ಬೆಳವಣಿಗೆಯಿಂದ ಮೊದಲೇ ಸಜ್ಜಾಗಿ ಬಂದಿದ್ದ ಕಾಂಗ್ರೆಸ್ ಸದಸ್ಯರು, ಸಭಾಪತಿ ಪೀಠದಲ್ಲಿ ಕುಳಿತಿದ್ದ ಧರ್ಮೇಗೌಡರನ್ನು ಎಳೆದಾಡಿದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ತಳ್ಳಾಟ, ನೂಕಾಟ ನಡೆದು, ಗದ್ದಲ, ಕೋಲಾಹಲವೇ ನಡೆಯಿತು. ಕಾಂಗ್ರೆಸ್-ಬಿಜೆಪಿ ಸದಸ್ಯರು ಪರಸ್ಪರ ಧಿಕ್ಕಾರದ ಘೋಷಣೆ ಕೂಗಿದರು. ತಳ್ಳಾಟ-ನೂಕಾಟ ತಡೆಯಲು ಬಂದ್ ಮಾರ್ಷಲ್‍ಗಳನ್ನೂ ಸದಸ್ಯರು ಎಳೆದಾಡಿದರು. ಈ ವೇಳೆ ಸಭಾಪತಿ ಪೀಠದ ಮುಂದೆ ಹಾಕಿದ ಕೋವಿಡ್ ಶೀಲ್ಡ್ ಒಡೆದು ಹೋಯಿತು.
ಕೊನೆಗೂ ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪ ಸಭಾಪತಿ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಎಳೆದು ತಂದು ಮೂಲ ಸ್ಥಾನದಲ್ಲಿ ಕೂರಿಸಿದರು. ಜತೆಗೆ ಆ ಸ್ಥಾನದಲ್ಲಿ ಹಿರಿಯ ಸದಸ್ಯ ಚಂದ್ರಶೇಖರ ಅವರನ್ನು ಕೂರಿಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಧಿಕ್ಕಾರದ ಘೋಷಣೆಗಳೂ ಮೊಳಗಿದವು.
ಈ ಹೈಡ್ರಾಮ ನಡೆಯುತ್ತಿರುವಾಗಲೇ ಬಿಜೆಪಿ ಸದಸ್ಯರು ಸಭಾಪತಿ ಪ್ರವೇಶ ದ್ವಾರಕ್ಕೆ ಮಾಡಿದ್ದ ಬಾಗಿಲನ್ನು ಕಾಂಗ್ರೆಸ್ ಸದಸ್ಯರು ಬಲವಂತವಾಗಿ ಓಪನ್ ಮಾಡಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸದನಕ್ಕೆ ಬರಲು ಅವಕಾಶ ಮಾಡಿಕೊಟ್ಟರು.
ಸಭಾಪತಿ ಪೀಠದಲ್ಲಿ ಕುಳಿತ ಪ್ರತಾಪಚಂದ್ರ ಶೆಟ್ಟಿ, ಮತ್ತೆ ವಿಧಾನಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ನಿರ್ಗಮಿಸಿದರು.
ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ, ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರೂ ಬಿಜೆಪಿ-ಕಾಂಗ್ರೆಸ್ ಸದಸ್ಯರ ಧಿಕ್ಕಾರದ ಘೋಷಣೆಗಳು ಮುಂದುವರೆದವು.
ಕಾಂಗ್ರೆಸ್-ಬಿಜೆಪಿ ಆರೋಪ ಪ್ರತ್ಯಾರೋಪ
ವಿಧಾನಪರಿಷತ್‍ನ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಮಾರಾಮಾರಿ ಬಗ್ಗೆ ಕಾಂಗ್ರೆಸ್, ಬಿಜೆಪಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಈ ಗಲಾಟೆಗೆ ಬಿಜೆಪಿಯೇ ನೇರ ಕಾರಣ. ಹೀಗಾಗಿ ಬಿಜೆಪಿ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇಂತಹ
ಬಿಜೆಪಿ ಸರ್ಕಾರ ಕಾನೂನುನ್ನು ಗಾಳಿಗೆ ತೂರಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೆ, ಕಾಂಗ್ರೆಸ್ ಸಂವಿಧಾನದ ರೀತಿ ನಡೆದುಕೊಳ್ಳದೆ ಕಾಂಗ್ರೆಸ್ ವರ್ತನೆ ಸಂಸದೀಯ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ಚರ್ಚೆ
ವಿಧಾನಪರಿಷತ್‍ನಲ್ಲಿ ನಡೆದ ಮಾರಾಮಾರಿ ವಿಚಾರವಾಗಿ ಕಾಂಗ್ರೆಸ್ ಸದಸ್ಯರು ನಡೆದುಕೊಂಡ ರೀತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ನಿರ್ಧರಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಸಚಿವರು, ಶಾಸಕರು ಹಾಗೂ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ರಾಜ್ಯಪಾರಿಗೆ ದೂರು ನೀಡುವುದರ ಜತೆ ಮುಂದಿನ ಕಾನೂನು ಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel