ಬೆಂಗಳೂರು: ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾದ ಒಂದು ವಿಧಾನಪರಿಷತ್ ಸ್ಥಾನಕ್ಕೆ ವಿಧಾನಸೌಧದಲ್ಲಿ ಮತದಾನ ಆರಂಭವಾಗಿದೆ. ವಿಧಾನಸೌಧದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 105ರಲ್ಲಿ ಬೆಳಗ್ಗೆ 9 ಗಂಟೆಯಿಂದ ಆರಂಭವಾಗಿರುವ ಮತದಾನ ಸಂಜೆ 4 ಗಂಟೆವರೆಗೆ ನಡೆಯಲಿದೆ. ಬಿಜೆಪಿಯ ಲಕ್ಷ್ಮಣ ಸವದಿ ಮಾತ್ರವೇ ಚುನಾವಣಾ ಕಣದಲ್ಲಿದ್ದಾರೆ. ಒಬ್ಬರೇ ಅಭ್ಯರ್ಥಿ ಇದ್ದರೂ ಸಹ ಮತದಾನ ಮಾಡಲೇ ಬೇಕಾಗಿದೆ. ಲಕ್ಷ್ಮಣ ಸವದಿ ಗೆಲುವು ಬಹುತೇಕ ಖಚಿತವೇ ಆಗಿದೆ. ಬಿಜೆಪಿ ಶಾಸಕರು ಮಾತ್ರವೇ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ.
ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕಾಂಗ ಪಕ್ಷ ನಾಯಕ ಯಡಿಯೂರಪ್ಪ ಅವರು, ‘ಲಕ್ಷ್ಮಣ ಸವದಿ ಅವರಿಗೇ ಮತ ನೀಡಬೇಕು’ ಎಂದು ಬಿಜೆಪಿ ಶಾಸಕರಿಗೆ ಸೂಚನೆ ನೀಡಿದ್ದಾರೆ. ಅಂತೆಯೇ ಬಿಜೆಪಿ ಶಾಸಕರು ಲಕ್ಷ್ಮಣ ಸವದಿ ಅವರಿಗೆ ಮತ ನೀಡುವುದು ಬಹುತೇಕ ಖಾಯಂ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಆರ್.ಅನಿಲ್ ಕುಮಾರ್ ಗೆ ಕಾಂಗ್ರೆಸ್, ಜೆಡಿಎಸ್ ಬೆಂಬಲ ನೀಡಿದ್ದವು. ಈಗಾಗಲೇ ಕಣದಿಂದ ಹಿಂದೆ ಸರಿದಿರುವುದಾಗಿ ಅನಿಲ್ ಕುಮಾರ್ ಪ್ರಕಟಿಸಿದ್ದಾರೆ. ಆದ್ರೆ ಅವರು ಗಡುವಿಗೂ ಮುನ್ನ ತಮ್ಮ ನಾಮಪತ್ರ ಹಿಂಪಡೆದಿರಲಿಲ್ಲ. ಹಾಗಾಗಿ ತಾಂತ್ರಿಕವಾಗಿ ಅವರು ಚುನಾವಣಾ ಕಣದಲ್ಲಿದ್ದಾರೆ. ಹೀಗಾಗಿ ಚುನಾವಣಾ ಪ್ರಕ್ರಿಯೆಗಳು ನಿಗದಿಯಂತೆ ನಡೆಯಲೇ ಬೇಕಿದೆ. ಅಲ್ಲದೆ ಈ ಕಾರಣಕ್ಕೆ ಲಕ್ಷ್ಮಣ್ ಸವದಿಯವರ ಆಯ್ಕೆ ಘೋಷಣೆ ವಿಳಂಬ ಆಗಲಿದೆ.








