ವಿಜಯ್ ಹಜಾರೆ ಟ್ರೋಫಿ | ಕರ್ನಾಟಕಕ್ಕೆ 291 ರನ್ ಗಳ ಜಯ
ಬೆಂಗಳೂರು : ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಬಿಹಾರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ 291 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ನಾಯಕ ಸಮರ್ಥ್ ಆರ್. ಸೆಂಚೂರಿ, ದೇವದತ್ತ್ ಪಡಿಕ್ಕಲ್ ಮತ್ತು ಸಿದ್ದಾರ್ಥ್ ಆಫ್ ಸೆಂಚೂರಿ, ಬೌಲರ್ ಗಳ ಟೈಟ್ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ ಬಿಹಾರ ವಿರುದ್ಧ ಭಾರಿ ಅಂತರದ ದಿಗ್ವಿಜಯ ಕಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬಿಹಾರ ಕರ್ನಾಟಕವನ್ನು ಬ್ಯಾಟಿಂಗ್ ಗೆ ಆಹ್ವಾಸಿನಿತು. ಕರ್ನಾಟಕದ ಪರ ಆರಂಭಿಕರಾಗಿ ಕ್ರೀಸ್ ಗೆ ಬಂದ ನಾಯಕ ಸಮರ್ಥ್ ಮತ್ತು ದೇವದತ್ತ ಪಡಿಕ್ಕಲ್ ಬಿಹಾರ ದಾಳಿಯನ್ನ ದೂಳಿಪಟ ಮಾಡಿದ್ರು.
ಬಿಹಾರ ತಂಡದ ಎಲ್ಲಾ ಲೆಕ್ಕಚಾರಗಳನ್ನ ಉಲ್ಟಾ ಮಾಡಿದ ಈ ಜೋಡಿ ಶತಕದ ಜೊತೆಯಾಟವಾಡಿದ್ರು. 144 ಎಸೆತಗಳಲ್ಲಿ ಸಮರ್ಥ್ ಅಜೇಯ 158 ರನ್ ಬಾರಿಸಿದರು.
ಪಡಿಕ್ಕಲ್ 97 ರನ್ ಗಳಿಸಿ ಔಟಾದರು. ಸಿದ್ದಾರ್ಥ್ ಕೇವಲ 55 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ಅಂತಿಮವಾಗಿ 50 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 354 ರನ್ ಕಲೆಹಾಕಿತು.
ಈ ಬೃಹತ್ ಮೊತ್ತದ ಬೆನ್ನಟ್ಟಿದ ಬಿಹಾರ ತಂಡಕ್ಕೆ ಕರ್ನಾಟಕದ ಬೌಲರ್ ಗಳು ಆರಂಭದಿಂದಲೇ ಕಡಿವಾಣ ಹಾಕುತ್ತಾ ಸಾಗಿದ್ರು. ಕರ್ನಾಟಕ ಬೌಲರ್ ಗಳ ದಾಳಿಗೆ ತತ್ತರಿಸಿದ ಬಿಹಾರ 6.2 ಓವರ್ ಕಳೆಯುವಷ್ಟರಲ್ಲಿ ಬಿಹಾರದ ಅರ್ಧ ತಂಡ ಪೆವಿಲಿಯನ್ ಸೇರಿಯಾಗಿತ್ತು.
ಆರಂಭಿಕ ಆಟಗಾರ ಎಸ್.ಗನಿ 37 ರನ್ ಬಾರಿಸಿದ್ದು ಬಿಟ್ಟರೇ ಬೇರ್ಯಾವ ಆಟಗಾರನೂ ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲಲಿಲ್ಲ. ಅಂತಿಮವಾಗಿ 27.2 ಓವರ್ ಗೆ ಬಿಹಾರ ತಂಡ 87 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಕರ್ನಾಟಕದ ಪರ ಪ್ರಸಿದ್ದ್ ಕೃಷ್ಣ ನಾಲ್ಕು ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್ ಮತ್ತು ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ರು.