Vijayapura Rain: ಭಾರಿ ಮಳೆಗೆ ತತ್ತರಿಸಿದ ಗುಮ್ಮಟ ನಗರಿ…
ಕಂಡು ಕೇಳರಿಯದ ಭಾರಿ ಮಳೆಗೆ ಗುಮ್ಮಟ ನಗರಿ ವಿಜಯಪುರ ಜನ ಬೆಚ್ಚಿ ಬಿದ್ದಿದ್ದಾರೆ. ವಿಜಯಪುರದಲ್ಲಿ ಸಂಜೆ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸತತ ಮೂರ್ನಾಲ್ಕು ಗಂಟೆಗಳ ಕಾಲ ಸುರಿದ ಮಳೆಯಿಂದ ನಗರದ ರಸ್ತೆಗಳಲ್ಲಿ ನದಿಯಂತೆ ನೀರು ಹರಿದಿದೆ.
ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲನಿ, ಶಹಾಪೇಟೆ, ಅಪ್ಸರಾ ಟಾಕೀಸ್ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಗಚ್ಚಿನಕಟ್ಟಿ ಕಾಲನಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ, ವಿದ್ಯುತ್ ಕೈ ಕೊಟ್ಟಿದ್ದರಿಂದ ಕರೆಂಟ್ ಇಲ್ಲದೆ ಜನತೆ ಪರದಾಡಿದ್ದಾರೆ.
ಸತತ ಮಳೆಯಿಂದ ನಗರದ ಕೆ.ಸಿ ಮಾರ್ಕೆಟ್ ಸಂಪೂರ್ಣ ಜಲಾವೃತ್ತವಾಗಿತ್ತು. ಕೆ.ಸಿ ಮಾರ್ಕೆಟ್‌ನ ರಸ್ತೆಗಳು ಮಳೆ ನೀರಲ್ಲಿ ಮುಳುಗಿ ಹೋಗಿದ್ವು. ಜನರ ನಡೆದಾಡೋದಕ್ಕು ಪರದಾಡುವಂತಾಯ್ತು. ರಸ್ತೆ ಬದಿಗಿದ್ದ ದ್ವಿಚಕ್ರವಾಹನಗಳು ನೀರಲ್ಲೆ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು.
ನಗರದ ಗೋಳಗುಮ್ಮಟ ರಸ್ತೆಯಲ್ಲಿನ ಪುರಾತನ ಆಂಜನೇಯ ದೇವಾಲಯಕ್ಕೆ ಮಳೆನೀರು ನುಗ್ಗಿದ್ದು ಗರ್ಭಗುಡಿ ಆಂಜನೆಯ ಮೂರ್ತಿಯ ಅರ್ಧದಷ್ಟು ನೀರಲ್ಲಿ ಮುಳುಗಿದೆ. ಇದರಿಂದ ಪ್ರತಿ ಶನಿವಾರ ಸಾಯಂಕಾಲ ನಡೆಯುತ್ತಿದ್ದ ಪಲ್ಲಕ್ಕಿ ಸೇವೆ, ಪೂಜಾ ಕೈಂಕರ್ಯಗಳು ಸ್ಥಗಿತಗೊಂಡಿವೆ.
ಮತ್ತೊಂದೆಡೆ ಶಹಾಪೇಟೆ ಮತ್ತು ಅಪ್ಸರಾ ಟಾಕೀಸ್ ಬಳಿಯೂ ಅಪಾರ ಪ್ರಮಾಣ ನೀರು ಮನೆಗಳಿಗೆ ನುಗ್ಗಿದೆ. ಜನರು ಭಾರಿ ಮಳೆಯಿಂದಾಗಿ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿತ್ತು. ಅಪ್ಸರಾ ಟಾಕೀಸ್ ಬಳಿ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಬೈಕುಗಳು ಮತ್ತು ಕಾರುಗಳು ನೀರುನಲ್ಲಿ ಮುಳುಗಡೆಯಾಗಿದ್ದು, ಸಿನಿಮಾ ವೀಕ್ಷಣೆಗೆ ಬಂದಿದ್ದ ಜನರ ಗೋಳು ಹೇಳತೀರದಾಗಿತ್ತು.








