ಕುಖ್ಯಾತ ರೌಡಿ ವಿಕಾಸ್ ದುಬೆ ಎನ್ ಕೌಂಟರ್ ಗೆ ಬಲಿ
ಕಾನ್ಪುರ, ಜುಲೈ 10: ಕಾನ್ಪುರ ದಲ್ಲಿ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆಯನ್ನು ಎನ್ ಕೌಂಟರ್ ಮೂಲಕ ಹತ್ಯೆಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶ ವಿಶೇಷ ಪೊಲೀಸ್ ಪಡೆ (ಎಸ್ ಟಿಎಫ್)
ಕಾನ್ಪುರ ಸಮೀಪ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ರೌಡಿಶೀಟರ್ ಅನ್ನು ಎನ್ ಕೌಂಟರ್ ಮಾಡಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಗುರುವಾರ ವಿಕಾಸ್ ದುಬೆಯನ್ನು ಬಂಧಿಸಿದ್ದು, ಇಂದು ಬೆಳಿಗ್ಗೆ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಎಸ್ ಟಿಎಫ್ ಪಡೆ ಉತ್ತರ ಪ್ರದೇಶದ ಕಾನ್ಪುರ ತಲುಪುತ್ತಿದ್ದಂತೆ, ಎಸ್ ಟಿಎಫ್ ಪಡೆಯ ವಾಹನವೊಂದು ಅಪಘಾತಕ್ಕೀಡಾಗಿ ಪಲ್ಟಿಯಾಯಿತು. ಈ ಸಮಯದಲ್ಲಿ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಇದರ ಪರಿಣಾಮವಾಗಿ ರೌಡಿಶೀಟರ್ ಅನ್ನು ಎನ್ ಕೌಂಟರ್ ಮಾಡಿದ್ದಾರೆ.
ಕಾನ್ಪುರದ ಸಚೆಂಡಿ ಗಡಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್ ಗಳೂ ಗಾಯಗೊಂಡಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
ವಿಕಾಸ್ ದುಬೆ ಈಗಾಗಲೇ ಸಾವನ್ನಪ್ಪಿದ್ದು, ಶವವನ್ನು ಸ್ಥಳದಿಂದ ಲಾಲಾ ಲಜಪತ್ ರಾಯ್ ಆಸ್ಪತ್ರೆ ಅಥವಾ ಹ್ಯಾಲೆಟ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.