ವಿಕಾಸ್ ದುಬೆ ಗೆ ಜಾಮೀನು ದೊರೆತಿರುವುದು ವ್ಯವಸ್ಥೆಯ ವೈಫಲ್ಯ – ಸುಪ್ರೀಂ ಕೋರ್ಟ್
ಕಾನ್ಪುರ, ಜುಲೈ 21: ದರೋಡೆಕೋರ ವಿಕಾಸ್ ದುಬೆ ಅವರ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ರಚಿಸಲಾದ ವಿಚಾರಣಾ ಸಮಿತಿಯಲ್ಲಿ ಮಾಜಿ ಉನ್ನತ ನ್ಯಾಯಾಲಯದ ನ್ಯಾಯಾಧೀಶರು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಯನ್ನು ಸೇರಿಸಲು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 20) ಉತ್ತರ ಪ್ರದೇಶ ಸರ್ಕಾರವನ್ನು ಸೂಚಿಸಿದೆ. ಅಲ್ಲದೇ ಉನ್ನತ ನ್ಯಾಯಾಲಯದ ನ್ಯಾಯಾಧೀಶರನ್ನು ವಿಚಾರಣಾ ಸಮಿತಿಯ ಭಾಗವಾಗಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಜುಲೈ 22 ರಂದು ಉತ್ತರ ಪ್ರದೇಶ ಸರ್ಕಾರವು ಹೊಸ ಕರಡು ಅಧಿಸೂಚನೆಯನ್ನು ನ್ಯಾಯಾಲಯದಲ್ಲಿ ಮಂಡಿಸಲಿದೆ ಎಂದು ನ್ಯಾಯಾಪೀಠ ತನ್ನ ವಿಚಾರಣೆಯಲ್ಲಿ ತಿಳಿಸಿದ್ದು ಬಳಿಕ ಈ ಪ್ರಕರಣದ ತೀರ್ಪನ್ನು ಪ್ರಕಟಿಸುತ್ತದೆ ಎಂದು ಹೇಳಿದೆ. ದರೋಡೆಕೋರನ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿದ್ದರೂ ಜಾಮೀನು ದೊರೆತಿರುವುದನ್ನು ನೋಡಿ ಗಾಬರಿಯಾಗಿದೆ ಎಂದಿರುವ ನ್ಯಾಯಾಲಯ ಇದು ವ್ಯವಸ್ಥೆಯ ವೈಫಲ್ಯ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ದುಬೆ ಮತ್ತು ಅವರ ಸಹಚರರ ಎನ್‌ಕೌಂಟರ್‌ಗಳ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಒಂದು ಅರ್ಜಿಯನ್ನು ಆಲಿಸಿದ್ದು, ಉತ್ತರಪ್ರದೇಶ ಸರ್ಕಾರಕ್ಕೆ ಕಾನೂನಿನ ನಿಯಮವನ್ನು ಎತ್ತಿಹಿಡಿಯಬೇಕು ಎಂದು ಹೇಳಿದ್ದಾರೆ.
ನೀವು ರಾಜ್ಯವಾಗಿ ಕಾನೂನಿನ ನಿಯಮವನ್ನು ಎತ್ತಿ ಹಿಡಿಯಬೇಕು ಹಾಗೆ ಮಾಡುವುದು ನಿಮ್ಮ ಕರ್ತವ್ಯ ಎಂದು ಉನ್ನತ ನ್ಯಾಯಾಲಯ ಹೇಳಿದೆ.
ಕಾನ್ಪುರ್ ಎನ್ಕೌಂಟರ್ ಹೈದರಾಬಾದ್ ಗಿಂತ ಹೇಗೆ ಭಿನ್ನವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಸಾಲಿಸಿಟರ್ ಜನರಲ್ ಮೆಹ್ತಾ ಅವರನ್ನು ಕೇಳಿದರು.
ಹೈದರಾಬಾದ್ ನಲ್ಲಿ ನವೆಂಬರ್ 2019ರಂದು ನಾಲ್ವರು ಸಾಮೂಹಿಕ ಅತ್ಯಾಚಾರ ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಬಗ್ಗೆ ತನಿಖೆ ನಡೆಸಲು ಯುಪಿ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜುಲೈ 3 ರಂದು ಬಿಕ್ರು ಗ್ರಾಮದಲ್ಲಿ ದಾಳಿಯ ಸಂದರ್ಭದಲ್ಲಿ ಕೊಲ್ಲಲ್ಪಟ್ಟ ಪೊಲೀಸ್ ಸಿಬ್ಬಂದಿಯ ಶವಗಳನ್ನು ದರೋಡೆಕೋರ ದುಬೆ ಸುಟ್ಟುಹಾಕಲು ಪ್ರಯತ್ನಿಸಿದ್ದಾನೆ ಎಂದು ಅವರು ಹೇಳಿದರು. ಈ ಕುರಿತು ಸಿಜೆಐ ಸಾಲಿಸಿಟರ್ ಜನರಲ್‌ಗೆ, ವಿಕಾಸ್ ದುಬೆ ಯಾರೆಂದು ನಮಗೆ ಹೇಳಬೇಡಿ ಎಂದು ಸೂಚಿಸಿದರು. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಜನರಲ್ ಮೆಹ್ತಾ ಸಮಯಾವಕಾಶ ಕೋರಿದರು.

ಡಿಎಸ್ಪಿ ದೇವೇಂದ್ರ ಮಿಶ್ರಾ ಸೇರಿದಂತೆ ಎಂಟು ಪೊಲೀಸರು ಕಾನ್ಪುರದ ಚೌಬೆಪುರ್ ಪ್ರದೇಶದ ಬಿಕ್ರು ಗ್ರಾಮದಲ್ಲಿ ದುಬೆ ಅವರನ್ನು ಬಂಧಿಸಲು ಹೋದಾಗ ಹೊಂಚು ಹಾಕಿ ಜುಲೈ 3 ರ ಮಧ್ಯರಾತ್ರಿಯ ನಂತರ ಮೇಲ್ಛಾವಣಿಯಿಂದ ಗುಂಡು ಹಾರಿಸಿ ಪೊಲೀಸರ ಹತ್ಯೆ ಮಾಡಲಾಯಿತು. ಜುಲೈ 10 ರ ಬೆಳಿಗ್ಗೆ ಉಜೈನಿಯಿಂದ ಕಾನ್ಪುರಕ್ಕೆ ಕರೆದೊಯ್ಯುತ್ತಿದ್ದ ವೇಳೆ ಪೊಲೀಸ್ ವಾಹನವು ಅಪಘಾತಕ್ಕೀಡಾಯಿತು ಮತ್ತು ಭೌತಿ ಪ್ರದೇಶದ ಸ್ಥಳದಿಂದ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗಿದ್ದ.








