ಬಿಜೆಪಿ ನಾಯಕರಿಗೆ ಮುಜುಗುರ ತಂದೊಡ್ಡಿದ ವಿನಯ್ ಬೆಂಬಲಿಗರ ಪ್ರತಿಭಟನೆ
ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಯಾತ್ರಿ ನಿವಾಸ ಉದ್ಘಾಟನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆಗಮಿಸಿದ ವೇಳೆ ಮಾಜಿ ಸಚಿವ ವಿನಯ್ ಬೆಂಬಲಿಗರು ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಯಾತ್ರಿ ನಿವಾಸ ಉದ್ಘಾಟನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಶಾಸಕ ಅಮೃತ ದೇಸಾಯಿ ಆಗಮಿಸಿದ್ದರು. ಈ ವೇಳೆ ವಿನಯ್ ಕುಲಕರ್ಣಿ ಬೆಂಬಗಲಿಗರು ವಿರೋಧ ಪಡಿಸಿದ್ದು, ಅವರಿಗೆ ಮುಜುಗರ ಉಂಟು ಮಾಡಿದೆ.
ವಿನಯ್ ಕುಲಕರ್ಣಿ ಅವರ ಅವಧಿಯಲ್ಲಿ ಹೆಬ್ಬಳ್ಳಿಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಆದರೆ ಯಾತ್ರಿ ನಿವಾಸದ ಮುಂದೆ ಹಾಕಲಾಗುವ ಕಲ್ಲಿನ ಬೋರ್ಡ್‌ನಲ್ಲಿ ವಿನಯ್ ಕುಲಕರ್ಣಿ ಅವರ ಹೆಸರು ಹಾಕದೇ ಇರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾತ್ರಿ ನಿವಾಸಕ್ಕೆ ಬೀಗ ಹಾಕಿ ಉದ್ಘಾಟನೆಗೆ ಅವಕಾಶ ಮಾಡಿಕೊಡದೆ ವಿರೋಧಿಸಿದ್ದಾರೆ.
ಶಾಸಕ ಅಮೃತ ದೇಸಾಯಿ ಅವರು ಪ್ರತಿಕ್ರಿಯಿಸಿ, ಶಿಷ್ಟಾಚಾರದ ಪ್ರಕಾರ ಇದನ್ನು ಉದ್ಘಾಟನೆ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.