9 ತಿಂಗಳ ಬಳಿಕ ವಿನಯ್ ಕುಲಕರ್ಣಿಗೆ ಬಿಡುಗಡೆ ಭಾಗ್ಯ
ಬೆಳಗಾವಿ : 2020ರ ನವೆಂಬರ್ 5ರಂದು ಹಿಂಡಲಗಾ ಜೈಲು ಸೇರಿದ್ದ ವಿನಯ್ ಕುಲಕರ್ಣಿಗೆ ಕೊನೆಗೂ ಬಿಡುಗಡೆ ಭಾಗ್ಯ ದೊರಕಿದೆ.
ಬರೋಬ್ಬರಿ 9 ತಿಂಗಳ ಕಾಲ ಜೈಲು ಹಕ್ಕಿಯಾಗಿದ್ದ ಮಾಜಿ ಸಚಿವ ವಿಜಯ್ ಕುಲಕರ್ಣಿ ಇಂದು ಹಿಂಡಲಗಾ ಜೈಲಿನಿಂದ ಹೊರಗಡೆ ಬಂದಿದ್ದಾರೆ.
ಅಂದಹಾಗೆ ವಿನಯ್ ಕುಲಕರ್ಣಿಯವರಿಗೆ ಗುರುವಾರವೇ ಜಾಮೀನು ನೀಡಲಾಗಿತ್ತು. ಆದ್ರೆ ಶುಕ್ರವಾರ ಕೋರ್ಟ್ ಆದೇಶದ ಪತ್ರಿ ಸಿಗದ ಹಿನ್ನೆಲೆಯಲ್ಲಿ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ.
ಅಲ್ಲದೆ ಕೋರ್ಟ್ ಆದೇಶದ ಪತ್ರಿಯನ್ನು ಇ ಮೇಲ್ ಮಾಡದೇ ಪೋಸ್ಟ್ ಮಾಡಲಾಗಿತ್ತು. ವರಮಹಾ ಲಕ್ಷ್ಮಿ ಹಬ್ಬ ಕಾರಣ ಪೋಸ್ಟ್ ಬರುವುದು ಇನ್ನಷ್ಟು ವಿಳಂಬವಾಗಿತ್ತು. ಕೊನೆಗೆ ಇಂದು ಸ್ಪೀಡ್ ಪೋಸ್ಟ್ ಮೂಲಕ ಆದೇಶದ ಪತ್ರಿ ಹಿಂಡಲಗಾ ಜೈಲು ತಲುಪಿದ್ದು, ಒಂಭತ್ತು ತಿಂಗಳ ಬಳಿಕ ವಿನಯ್ ಕುಲಕರ್ಣಿ ಜೈಲಿನಿಂದ ಹೊರಗಡೆ ಬಂದಿದ್ದಾರೆ.
ಇತ್ತ ವಿನಯ್ ಕುಲಕರ್ಣಿ ಹೊರಗೆ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ಅವರ ಅಭಿಮಾನಿಗಳು ಸಂಭ್ರಮಿಸಿದರು. ಅಲ್ಲದೆ ಕಾರ್ ನಲ್ಲೇ ವಿನಯ್ ಕುಲಕರ್ಣಿಯವರನ್ನು ಮೆರವಣಿಗೆ ಮೂಲಕ ಕರೆದೊಯ್ಯಲಾಗಿದೆ. ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದು ಹಾರ ಹಾಕಿ, ಹೂವು ಎರಚಿ ಸಂಭ್ರಮಿಸುತ್ತಿದ್ದಾರೆ.