ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದಾರೆ. ಆದರೆ, ಕುಲಕರ್ಣಿ ಬಂಧನದ ಹಿಂದೆ ರಾಜಕೀಯ ಕೈವಾಡವಿದೆ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಆರೋಪಿಸಿದ್ದರೆ, ಕಾಂಗ್ರೆಸ್ ಇದನ್ನು ರಾಜಕೀಯ ಬಣ್ಣ ಕಟ್ಟುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಹೇಳಿದೆ.
ಸಿಬಿಐ ಅಧಿಕಾರಿಗಳು ತಮ್ಮನ್ನು ಬಂಧಿಸುತ್ತಿದ್ದಂತೆ ಇದು 100 ಪರ್ಸೆಂಟ್ ರಾಜಕೀಯ ಎಂದು ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ.
ರಾಜಕೀಯ ಪ್ರೇರಿತ ಎಂದ ಸಿದ್ದರಾಮಯ್ಯ..!
ವಿನಯ್ ಕುಲಕರ್ಣಿ ಬಂಧನ ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಜತೆ ನಾನು ಮಾತನಾಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನ್ನ ಬಳಿ ಹೇಳಿದ್ದಾನೆ. ವಿಚಾರಣೆ ಹಂತದಲ್ಲಿರುವಾಗ ಹೆಚ್ಚಿಗೆ ಹೇಳಲಾರೆ ಎಂದಿದ್ದಾರೆ.
ಇದು ರಾಜಕೀಯ ಒತ್ತಡದಿಂದ ಆಗಿದೆ: ಹೊರಟ್ಟಿ
ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ಬಂಧನ ರಾಜಕೀಯ ಒತ್ತಡದಿಂದ ಆಗಿದೆ. ವಿನಯ್ ಕುಲಕರ್ಣಿ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೇ ಕಾರಣಕ್ಕೆ ಇವತ್ತು ಬಂಧಿಸಿದ್ದಾರೆ ಎಂದು ಸಾರ್ವಜನಿಕರು ಚರ್ಚೆ ಮಾಡುವಂತಾಗಿದೆ. ಬಿಜೆಪಿ ಹೈಕಮಾಂಡ್ ಭೇಟಿಗೆ ವಿನಯ್ ಕುಲಕರ್ಣಿ ಹೋಗಿದ್ದು ನಿಜ. ಆದ್ರೆ ಯಾರು ಯಾರನ್ನ ಕರೆದಿದ್ದರು ಎನ್ನುವುದು ಗೊತ್ತಿಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಹೊರಟ್ಟಿ, ಈ ಹಿಂದೆ ಬಿಜೆಪಿಯವರು ಸಿಬಿಐ ಕಾಂಗ್ರೆಸ್ ಕೈಗೊಂಬೆ ಅಂತಿದ್ರು, ಈಗ ಕಾಂಗ್ರೆಸ್ ನವರು ಸಿಬಿಐ ಬಿಜೆಪಿ ಕೈಗೊಂಬೆ ಅಂತಿದಾರೆ. ಇದು ರಾಜಕೀಯ ಪ್ರೇರಿತವಾಗಬಾರದು. ಕಾನೂನು ಎಲ್ಲರಿಗೂ ಒಂದೇ, ಇದರಲ್ಲಿ ರಾಜಕೀಯ ಮಾಡಬಾರದು. ಸಿಬಿಐ ಆಗಲಿ ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಇಂತಹ ಸಂಸ್ಥೆಗಳನ್ನ ಅಧಿಕಾರಕ್ಕೆ ಬಂದಾಗ ಪಕ್ಷಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಾಜಕೀಯ ಬಣ್ಣ ಬಣ್ಣ ಸರಿಯಲ್ಲ-ಡಿಸಿಎಂ ಅಶ್ವತ್ಥ ನಾರಾಯಣ
ವಿನಯ್ ಕುಲಕರ್ಣಿ ಬಂಧನ ವಿಚಾರಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರದ ಬಗ್ಗೆ ಆರೋಪವಿತ್ತು. ಧಾರವಾಡದಲ್ಲಿ ಹೋರಾಟಗಲೂ ನಡೆದಿದ್ದವು. ಇದರಲ್ಲಿ ಬಿಜೆಪಿ ಸರ್ಕಾರದ ಪಾತ್ರವೇನಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಪ್ರತಿಸಲವೂ ಯಾರ ಮೇಲಾದರೂ ಐಟಿ ದಾಳಿ, ಇಡಿ ಅಥವಾ ಸಿಬಿಐ ದಾಳಿಯಾದರೆ ಅದೆಲ್ಲಕ್ಕೂ ರಾಜಕೀಯ ದ್ವೇಷಕಟ್ಟಿ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಕಾನೂನು ತನ್ನ ಕೆಲಸವನ್ನು ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸಿಬಿಐ ತನ್ನ ಕೆಲಸ ಮಾಡಿದೆ; ಬೊಮ್ಮಾಯಿ
ವಿನಯ್ ಕುಲಕರ್ಣಿ ಬಂಧನ ವಿಚಾರದಲ್ಲಿ ಸಿಬಿಐ ತನ್ನ ಕೆಲಸ ಮಾಡಿದೆ. ಅದರಲ್ಲಿ ನಾವೇನೂ ಹೇಳುವುದಕ್ಕೆ ಬರುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel