ಟೀಮ್ ಇಂಡಿಯಾದ ಗರ್ಭಗುಡಿಗೆ ವಿರಾಟ್ ಬರಲು ಆ ಒಂದು ಅಜೇಯ ಶತಕವೇ ಕಾರಣವಾಯ್ತು…!
ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಯಶಸ್ವಿ ನಾಯಕ. ವಿಶ್ವ ಕ್ರಿಕೆಟ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಡೆಲ್ಲಿಯ ಹೀರೋ. 19 ವಯೋಮಿತಿ ವಿಶ್ವಕಪ್ ಆಡುವುದಕ್ಕಿಂತ ಮುಂಚೆಯೇ ದೆಹಲಿ ತಂಡದ ಪರ ರಣಜಿ ಆಟವಾಡಿದ್ದರು ವಿರಾಟ್ ಕೊಹ್ಲಿ. ರಣಜಿ ಪಂದ್ಯದ ಅನುಭವದಿಂದಲೇ ತಮ್ಮ ನಾಯಕತ್ವದಲ್ಲಿ 19 ವಯೋಮಿತಿ ವಿಶ್ವಕಪ್ ಟೂರ್ನಿಯನ್ನು ಗೆದ್ದುಕೊಂಡಿದ್ದರು.
ಆಗಲೇ ಕ್ರಿಕೆಟ್ ಪಂಡಿತರು ವಿರಾಟ್ ಕೊಹ್ಲಿಯ ಬಗ್ಗೆ ಭವಿಷ್ಯ ನುಡಿದಿದ್ದರು. ಹೀಗಾಗಿಯೇ ಅಂದಿನ ಆಯ್ಕೆ ಸಮಿತಿ ಮುಖ್ಯಸ್ಥ ದಿಲೀಪ್ ವೆಂಗ್‍ಸರ್ಕರ್ ಅವರು ವಿರಾಟ್ ಮೇಲೆ ಒಂದು ಕಣ್ಣಿಟ್ಟಿದ್ದರು. ಆಕ್ರಮಣಕಾರಿ ಆಡುವ ಹಾಗೂ ಏಕಾಂಗಿಯಾಗಿ ಹೋರಾಡುತ್ತಿದ್ದ ಛಲವನ್ನು ನೋಡಿದಾಗ ಈ ಹುಡುಗ ಟೀಮ್ ಇಂಡಿಯಾದಲ್ಲಿ ಆಡಬೇಕು ಎಂದು ಆಗಲೇ ಹೇಳಿಕೊಂಡಿದ್ದರು. ಯಾಕಂದ್ರೆ ವಿರಾಟ್ ಆಟವೇ ಅಂತಹುದ್ದಾಗಿತ್ತು.
ಹೀಗೆ ಆಸ್ಟ್ರೇಲಿಯಾದಲ್ಲಿ ಎರ್ಮಜಿಂಗ್ ಪ್ಲೇಯರ್ಸ್
ಟೂರ್ನಿಯಲ್ಲಿ ವಿರಾಟ್ ಕೊಹ್ಲಿಗೆ ಆಡುವ ಅವಕಾಶ ಸಿಕ್ಕಿತ್ತು. ಭಾರತ ಎ ತಂಡದ ಪರ ಆಡಿದ್ದ ವಿರಾಟ್ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದರು. ಟೂರ್ನಿಯ ಪ್ರಥಮ ಪಂದ್ಯದಲ್ಲಿ ನ್ಯೂಜಿಲೆಂಡ್ ಎ ತಂಡದ ವಿರುದ್ಧ ಭಾರತ ಎ ತಂಡ ಆಡಿತ್ತು. ಅಲ್ಲಿ ಕೊಹ್ಲಿ ಅಜೇಯ ಶತಕ ದಾಖಲಿಸಿದ್ದರು. ಈ ಶತಕವೇ ವಿರಾಟ್ ಕೊಹ್ಲಿಯವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡುವಂತೆ ಮಾಡಿತ್ತು ಅಂತ ಹೇಳ್ತಾರೆ ದಿಲೀಪ್ ವೆಂಗ್‍ಸರ್ಕರ್.
ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಆ ಪಂದ್ಯದಲ್ಲಿ ಭಾರತ ಎ ತಂಡಕ್ಕೆ ಬೇಕಾಗಿದ್ದದ್ದ ರನ್‍ಗಳು 240-250 ರನ್. ಅಚ್ಚರಿ ಎಂಬಂತೆ ವಿರಾಟ್ ಕೊಹ್ಲಿಗೆ ಆ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುವಂತೆ ಸೂಚನೆ ನೀಡಲಾಗಿತ್ತು. ಸವಾಲನ್ನು ಸ್ವೀಕರಿಸಿ ನ್ಯೂಜಿಲೆಂಡ್ ಎ ತಂಡ ಬೌಲರ್‍ಗಳ ಬೆವರಿಳಿಸಿದ್ರು. ಅಲ್ಲದೇ ಅಜೇಯ 123 ರನ್ ಸಿಡಿಸಿದ್ರು. ಇಲ್ಲಿ ಶತಕಕ್ಕಿಂತ ಮುಖ್ಯವಾಗಿ ನನಗೆ ಕಂಡಿದ್ದು ತಂಡವನ್ನು ಗೆಲುವಿನ ದಡ ಸೇರಿಸಿದ್ದ ರೀತಿ. ಯಾಕಂದ್ರೆ ಆರಂಭದಿಂದ ಅಂತ್ಯದ ತನಕ ಜವಾಬ್ದಾರಿಯಿಂದ ಆಡಿದ್ದ ವಿರಾಟ್‍ಗೆ ಟೀಮ್ ಇಂಡಿಯಾದಲ್ಲಿ ಎಂಟ್ರಿಯಾಗುವ ಅವಕಾಶ ಸಿಕ್ಕಿತ್ತು.
ನಾನು ಆತನ ಆಟ ನೋಡಿ ಖುಷಿ ಪಟ್ಟೆ. ಈ ಹುಡುಗ ಟೀಮ್ ಇಂಡಿಯಾದಲ್ಲಿ ಆಡಬೇಕು ಎಂಬ ನಿರ್ಧಾರಕ್ಕೆ ಬಂದೆ ಎಂಬುದನ್ನು ದುಲೀಪ್ ವೆಂಗ್‍ಸರ್ಕರ್ ಈ ಸಂದರ್ಭದಲ್ಲಿ ನೆನಪಿಸಿಕೊಂಡ್ರು.
ನಂತರ ನಡೆದಿರುವುದೆಲ್ಲಾ ಇತಿಹಾಸ, 2008ರಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ ವಿರಾಟ್ ಆರಂಭದ ಮೂರು ನಾಲ್ಕು ವರ್ಷ ತಂಡಕ್ಕೆ ಹೋಗಿ ಬರುವ ಆತಿಥಿ ಆಟಗಾರನಾಗಿದ್ದರು. ಆದ್ರೂ ಸಿಕ್ಕ ಅವಕಾಶಗಳನ್ನು ಸರಿಯಾಗಿಯೇ ಬಳಸಿಕೊಂಡ್ರು. ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಈಗ ವಿಶ್ವ ಕ್ರಿಕೆಟ್‍ನಲ್ಲಿ ಸಾಮ್ರಾಟನಾಗಿ ಮೆರೆಯುತ್ತಿದ್ದಾರೆ. ಸಚಿನ್ ತೆಂಡುಲ್ಕರ್ ಅವರ ದಾಖಲೆಗಳನ್ನು ಅಳಿಸಿ ಹಾಕುವ ಎಲ್ಲಾ ಸೂಚನೆಗಳನ್ನು ನೀಡುತ್ತಿದ್ದಾರೆ.








