ದಿಗ್ಗಜರ ಪಟ್ಟಿ ಸೇರಲು ವಿರಾಟ್ ಗೆ ಬೇಕು.. 38 ರನ್ಸ್..!
ಟೀಂ ಇಂಡಿಯಾದ ರನ್ ಮಿಷನ್ ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತಿದೆ.
ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿ ಬ್ಯಾಟರ್ ಆಗಿ ದಾಖಲೆಗಳ ದಾಖಲೆ ನಿರ್ಮಿಸುತ್ತಾ ಸಾಗುತ್ತಿದ್ದಾರೆ.
ಇದರ ಮುಂದುವರೆದ ಭಾಗವಾಗಿ ಶ್ರೀಲಂಕಾ ವಿರುದ್ಧದ ನಡೆಯಲಿರುವ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಗೆ ನೂರನೇ ಟೆಸ್ಟ್ ಪಂದ್ಯವಾಗಿರಲಿದೆ.
ಹೀಗಾಗಿ ಲಂಕಾ ವಿರುದ್ಧ ಮೊಹಾಲಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ವಿರಾಟ್ ವೃತ್ತಿ ಜೀವನದಲ್ಲಿ ಪ್ರತ್ಯೇಕವಾದ ಸ್ಥಾನ ಪಡೆಯಲಿದೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುವ ಮೂಲಕ ಟೀಂ ಇಂಡಿಯಾ ಪರ 100ನೇ ಟೆಸ್ಟ್ ಆಡುತ್ತಿರುವ 12ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಈ ವಿಷಯ ಪಕ್ಕಕ್ಕಿಟ್ಟರೆ ಕೊಹ್ಲಿ ತಮ್ಮ 100ನೇ ಟೆಸ್ಟ್ ನಲ್ಲಿ ದಾಖಲೆ ಬರೆಯಲಿದ್ದಾರೆ. ಕೊಹ್ಲಿ ಪ್ರಸ್ತುತ 99 ಟೆಸ್ಟ್ಗಳಲ್ಲಿ 7,962 ರನ್ ಗಳಿಸಿದ್ದಾರೆ.
ಮೊಹಾಲಿ ಟೆಸ್ಟ್ನಲ್ಲಿ ಕೊಹ್ಲಿ 38 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ 8,000 ರನ್ ಗಡಿ ದಾಟಲಿದ್ದಾರೆ. ಈ ಮೂಲಕ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಪರ 8 ಸಾವಿರ ರನ್ ಪೂರೈಸಿದ ಆರನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ.
ಭಾರತದ ಪರ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ವಿವಿಎಸ್ ಲಕ್ಷ್ಮಣ್ 8 ಸಾವಿರ ರನ್ ಗಳಿಸಿದ್ದಾರೆ.
ಸಚಿನ್ 8,000 ರನ್ ಮೈಲುಗಲ್ಲು ತಲುಪಲು 154 ಇನ್ನಿಂಗ್ಸ್ ತೆಗೆದುಕೊಂಡಿದ್ದರು, ರಾಹುಲ್ ದ್ರಾವಿಡ್ (158 ಇನ್ನಿಂಗ್ಸ್), ವೀರೇಂದ್ರ ಸೆಹ್ವಾಗ್ (160 ಇನ್ನಿಂಗ್ಸ್), ಸುನಿಲ್ ಗವಾಸ್ಕರ್ (166 ಇನ್ನಿಂಗ್ಸ್) ಮತ್ತು ವಿವಿಎಸ್ ಲಕ್ಷ್ಮಣ್ (201 ಇನ್ನಿಂಗ್ಸ್) ತೆಗೆದುಕೊಂಡಿದ್ದರು.









