Virat Kohli Birthday – ಕಿಂಗ್ ಕೊಹ್ಲಿ.. ಕ್ರಿಕೆಟ್ ರಾಕ್ಷಸನ ಇಂಟ್ರಸ್ಟಿಂಗ್ ಕಹಾನಿ
ವಿರಾಟ್ ಕೊಹ್ಲಿ.. ಕ್ರಿಕೆಟ್ ಪ್ರಪಂಚಕ್ಕೆ ಪರಿಚಯ ಬೇಕಿಲ್ಲದ ಹೆಸರು.. ಟೀಂ ಇಂಡಿಯಾ ರನ್ ಮಿಷಿನ್, ಚೇಸಿಂಗ್ ಚಾಂಪಿಯನ್, ಕಿಂಗ್ ಕೊಹ್ಲಿ. ಹೀಗೆ ಎಷ್ಟು ಹೆಸರುಗಳಿಂದ ಕರೆದರೂ ಅವರ ಮೇಲಿನ ಅಭಿಮಾನ ಕಡಿಮೆಯಾಗುವುದಿಲ್ಲ. ಪರ್ವತಗಳು ಕರಗುತ್ತವೆ ಎಂಬ ಮಾತು ನಿಜವೋ ಸುಳ್ಳೋ ಗೊತ್ತಿಲ್ಲ, ಆದ್ರೆ ವಿರಾಟ್ ಎಂಬ ಶಿಖರ್ ಎಂದಿಗೂ ಕರಗುವುದಿಲ್ಲ. ವಯಸ್ಸಾಗುತ್ತಿದ್ದರೂ ಅವರಲ್ಲಿರುವ ಆಟ ಮತ್ತಷ್ಟು ಸುಧಾರಿಸುತ್ತಿದೆ. ವರ್ಷ ಹಿಂದೆ ವಿರಾಟ್ ರನ್ನ ಟೀಕಿಸಿದವರೇ ಇಂದು ಅವರನ್ನ ಹಾಡಿ ಹೊಗಳುತ್ತಿದ್ದಾರೆ. ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಟಾಸ್ ಸ್ಕೋರರ್ ಆಗಿದ್ದಾರೆ. 2011ರ ಏಕದಿನ ವಿಶ್ವಕ ಗೆದ್ದ ತಂಡದಲ್ಲಿದ್ದ ವಿರಾಟ್ ಕೊಹ್ಲಿ, ಇದೀಗ ಟಿ 20 ವಿಶ್ವಕಪ್ ಗೆಲ್ಲುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ.

ಜೀವನದಲ್ಲಿ ಎಷ್ಟೇ ಹೊಡೆತಗಳು ಬಿದ್ದರೂ ಅವುಗಳನ್ನು ಸಹಿಸಿಕೊಂಡು ನಿಲ್ಲುವರೇ ದೊಡ್ಡ ವ್ಯಕ್ತಿಯಾಗುತ್ತಾರೆ ಎಂದು ತಮ್ಮ ತಂದೆ ಹೇಳಿದ ಮಾತನ್ನು ವಿರಾಟ್ ಕೊಹ್ಲಿ ಇಂದಿನವರೆಗೂ ಪಾಲಿಸಿಕೊಂಡು ಬಂದಿದ್ದಾರೆ. ಆತನನ್ನ GOAT ಅಂತಾ ಕರೆದಾಗ, ಹಾಗೇ ನನ್ನ ಸಂಭೋದಿಸಬೇಡಿ, ಅದಕ್ಕೆ ನಾನು ಅರ್ಹನಲ್ಲ ಎಂದಿದ್ದು ವಿರಾಟ್ ಅವರ ಮೇರು ವ್ಯಕ್ತಿತ್ವಕ್ಕೆ ಕನ್ನಡಿ. ಕಿಂಗ್ ಆಫ್ ಕ್ರಿಕೆಟ್ ಅಂತಾ ಕರೆಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಇಂದು 34 ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
15 ನೇ ವಯಸ್ಸಿನಲ್ಲಿ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ವಿರಾಟ್, ಆ ನಂತರ ಹಂತ ಹಂತವಾಗಿ ಬೆಳೆದು 2008ರಲ್ಲಿ ಅಂಡರ್ 19 ವಿಶ್ವಕಪ್ ಗಾಗಿ ಭಾರತ ಕ್ರಿಕೆಟ್ ತಂಡದ ನಾಯಕರಾದರು. ಅಲ್ಲದೇ ಟೀಂ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟರು. ಇದು ಕೊಹ್ಲಿ ಕೆರಿಯರ್ ನ ಟರ್ನಿಂಗ್ ಪಾಯಿಂಟ್. ಇದೇ ಸಂದರ್ಭದಲ್ಲಿ ರಣಜಿ ಪಂದ್ಯದ ವೇಳೆ ತಂದೆಯನ್ನ ಕಳೆದುಕೊಂಡರೂ ಬ್ಯಾಟ್ ಬೀಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರು. ಆ ಮೂಲಕ ಅಂದೇ ಕ್ರಿಕೆಟ್ ಬಗ್ಗೆ ತಮಗಿದ್ದ ಬದ್ಧತೆಯನ್ನು ಸಾರಿಸಿದ್ದರು.

2008ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಎಮರ್ಜಿಂಗ್ ಪ್ಲೇಯರ್ಸ್ ಟೂರ್ನಮೆಂಟ್ ನಲ್ಲಿ ನೂರು ರನ್ ಗಳಿಸಿದ ಬಳಿಕ ವಿರಾಟ್ ಟೀಂ ಇಂಡಿಯಾಗೆ ಪ್ರವೇಶ ಪಡೆದರು. ಸಚಿನ್, ವೀರೇಂದ್ರ ಸೆಹ್ವಾಗ್ ಇಬ್ಬರೂ ಗಾಯಗೊಂಡಿದ್ದ ಕಾರಣ 2008ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಅಂತರಾಷ್ಟ್ರಿಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಆ ನಂತರ ವಿರಾಟ್ ಹಿಂದೆ ತಿರುಗಿ ನೋಡಿದ್ದೇ ಇಲ್ಲ.
ಆ ನಂತರ ಧೋನಿ ಮಾರ್ಗದರ್ಶನದಲ್ಲಿ ಅರ್ಜುನಂತೆ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ, ಬಳಿಕ ಟೀಂ ಇಂಡಿಯಾ ಸಾರಥಿಯಾದರು. ಅಂದಿನಿಂದ ಟೀಂ ಇಂಡಿಯಾಗೆ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಬ್ಯಾಟರ್ ಆಗಿ 2019 ರ ವಿಶ್ವಕಪ್ ನಲ್ಲಿ ಬ್ಯಾಕ್ ಟು ಬ್ಯಾಕ್ ಐದು ಅರ್ಧಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ನಾಯಕರಾದರು. ಅಷ್ಟೆ ಅಲ್ಲದೇ ಟಿ 20 ವಿಶ್ವಕಪ್ ನಲ್ಲೂ ಹಾಫ್ ಸೆಂಚೂರಿ ಸಾಧಿಸಿದ ಮೊದಲ ನಾಯಕ ವಿರಾಟ್. ಧೋನಿ ಅವರಿಂದ ನಾಯಕತ್ವದ ಜವಾಬ್ದಾರಿ ಪಡೆದ ವಿರಾಟ್ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಐದನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾವನ್ನು ನಂಬರ್ ಒನ್ ಮಾಡಿದರು. ಅತಿ ಕಡಿಮೆ ಅವಧಿಯಲ್ಲಿ 40 ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕರಾಗಿ ವಿರಾಟ್ ಹೆಸರು ಅಜರಾಮರ.

ಆದ್ರೆ ಕಳೆದ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ನೀರಸ ಪ್ರದರ್ಶನ ಎಲ್ಲವನ್ನ ಉಲ್ಟಾ ಮಾಡಿತು. ಅಲ್ಲಿಂದ ನಾಯಕತ್ವ ತ್ಯಜಿಸಿದ ವಿರಾಟ್ ನಂತರ ಬ್ಯಾಟಿಂಗ್ ನಲ್ಲೂ ಮಂಕಾದರು. ಬರೋಬ್ಬರಿ ಮೂರು ವರ್ಷಗಳ ಕಾಲ ವಿರಾಟ್ ಬ್ಯಾಟ್ ನಿಂದ ಸೆಂಚೂರಿ ಸಿಡಿಯಲೇ ಇಲ್ಲ. ಇನ್ನೇ ಕೊಹ್ಲಿ ಖೇಲ್ ಖತಂ ಎನ್ನುವಷ್ಟರಲ್ಲಿ ವಿರಾಟ್ ಕೊಹ್ಲಿ ಏಷ್ಯಾಕಪ್ ನಲ್ಲಿ ಸ್ಟ್ರಾಂಗ್ ಕಂ ಬ್ಯಾಕ್ ಮಾಡಿದ್ರು. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ವಿಶ್ವಕಪ್ ಅನ್ನು ಗೆಲ್ಲುವುದೇ ಗುರಿಯಾಗಿಸಿಕೊಂಡಿರುವಂತೆ ವಿರಾಟ್ ಕೊಹ್ಲಿ ಆರ್ಭಟಿಸುತ್ತಿದ್ದಾರೆ.
ಸದ್ಯ ವಿಶ್ವಕಪ್ ನಲ್ಲಿ ಟಾಪ್ ರನ್ ಸ್ಕೋರರ್ ಆಗಿರುವ ವಿರಾಟ್ ಕೊಹ್ಲಿಯ ಕ್ಲಾಸ್ ಬಗ್ಗೆ ಹೇಳಲು ಪಾಕ್ ವಿರುದ್ಧದ ಇನ್ನಿಂಗ್ಸ್ ಒಂದು ಸಾಕು. ಇನ್ನು ವಿಶ್ವ ಕ್ರಿಕೆಟ್ ನಲ್ಲಿ ದಾಖಲೆಗಳ ಸರದಾರ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಸಾಧಿಸಿರುವ ದಾಖಲೆಗಳನ್ನು ಯಾರಾದರೂ ಬ್ರೇಕ್ ಮಾಡುವವರು ಇದ್ದಾರಾ ಅಂದ್ರೆ ಅದಕ್ಕೆ ಸಿಗುವ ಒಂದೇ ಒಂದು ಹೆಸರು ವಿರಾಟ್ ಕೊಹ್ಲಿ.

ವಿರಾಟ್ ರಂತಹ ಕ್ರಿಕೆಟರ್ ಇರಬೇಕಿತ್ತು ಅಂತಾ ಕ್ರಿಕೆಟ್ ಆಡುವ ಪ್ರತಿಯೊಂದು ದೇಶವೂ ಅಂದುಕೊಳ್ಳುತ್ತೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 24 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಕೊಹ್ಲಿ, ಏಕದಿನದಲ್ಲಿ 43, ಟೆಸ್ಟ್ ನಲ್ಲಿ 27, ಟಿ 20 ಕ್ರಿಕೆಟ್ ನಲ್ಲಿ 1 ಸೆಂಚೂರಿಗಳೊಂದಿಗೆ ಒಟ್ಟಾರೆ 71 ಶತಕಗಳನ್ನು ಬಾರಿಸಿದ್ದಾರೆ.








