ಇಂಗ್ಲೆಂಡ್ ನೆಲದಲ್ಲಿ ಆಡುವುದು ಹೊಸದಲ್ಲ – ನ್ಯೂಜಿಲೆಂಡ್ ಗೆ ಕೊಹ್ಲಿ ವಾರ್ನಿಂಗ್
ಇಂಗ್ಲೆಂಡ್ ನೆಲ ನಮಗೆ ಹೊಸದಲ್ಲ. ಇಂಗ್ಲೆಂಡ್ ಮೈದಾನದಲ್ಲಿ ಮೊದಲ ಬಾರಿ ಆಡುತ್ತಿಲ್ಲ. ಆಂಗ್ಲರ ನೆದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದೇವೆ. ಹೀಗಾಗಿ ಅಲ್ಲಿನ ವಾತಾವರಣ ಹೇಗೆ ಎಂಬುದು ತಿಳಿದಿದೆ. ಇದ್ರಿಂದ ಅಭ್ಯಾಸದ ಕೊರತೆ ಕಾಡುವುದಿಲ್ಲ. ಇದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಆತ್ಮವಿಶ್ವಾಸದ ನುಡಿಗಳು.
ಜೂನ್ 18ರಿಂದ ಇಂಗ್ಲೆಂಡ್ ನ ಸೌತಂಪ್ಟನ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯ ನಡೆಯಲಿದೆ.
ಮಹಾಮಾರಿ ಕೋರೋನಾದಿಂದಾಗಿ ಉಭಯ ತಂಡಗಳು ಜೈವಿಕ ಸುರಕ್ಷತೆಯಡಿಯಲ್ಲಿ ಫೈನಲ್ ಟೆಸ್ಟ್ ಪಂದ್ಯವನ್ನು ಆಡಲಿದೆ. ಏತನ್ಮಧ್ಯೆ, ಕ್ವಾರಂಟೈನ್ ನಲ್ಲಿದ್ದುಕೊಂಡು, ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಆಟಗಾರರು ಪಂದ್ಯವನ್ನಾಡುತ್ತಿದ್ದಾರೆ.
ಇದ್ರಿಂದ ಆಟಗಾರರು ಮಾನಸಿಕವಾಗಿ ವಿಚಲಿತರಾಗುವುದು ಸಹಜ. ಅದೇ ರೀತಿ ಅಭ್ಯಾಸದ ಕೊರತೆ ಕೂಡ ಕಾಡುತ್ತಿದೆ. ಆದ್ರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ತಂಡದ ಮೇಲೆ ಅಪಾರವಾದ ನಂಬಿಕೆ ಮತ್ತು ಆತ್ಮವಿಶ್ವಾಸವಿದೆ. ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ಪಿಚ್ ಗೆ ಸರಿಯಾದ ರೀತಿಯಲ್ಲಿ ಹೊಂದಿಕೊಳ್ಳುತ್ತಾರೆ ಅನ್ನೋ ಭರವಸೆ ಇದೆ.
ಅಂದ ಹಾಗೇ ಟೀಮ್ ಇಂಡಿಯಾಗೆ ಕೇವಲ ನಾಲ್ಕು ಹಂತದಲ್ಲಿ ಅಬ್ಯಾಸ ಮಾಡಲು ಅವಕಾಶ ಸಿಕ್ಕಿದೆ. ಆದ್ರೆ ನ್ಯೂಜಿಲೆಂಡ್ ಗೆ ಹಾಗಲ್ಲ. ಫೈನಲ್ ಟೆಸ್ಟ್ ಪಂದ್ಯದ ಮುನ್ನ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಹೀಗಾಗಿ ನ್ಯೂಜಿಲೆಂಡ್ ತಂಡಕ್ಕೆ ಮ್ಯಾಚ್ ಫ್ರಾಕ್ಟೀಸ್ ಮಾಡಲು ಅವಕಾಶ ಸಿಕ್ಕಿದೆ.
ಒಂದು ಬಾರಿ ಮೈದಾನಕ್ಕೆ ಇಳಿದ ನಂತರ ಆಟಗಾರರು ಮಾನಸಿಕವಾಗಿ ಸಿದ್ಧಗೊಳ್ಳುತ್ತಾರೆ. ಪಂದ್ಯ ಯಾವುದೇ ಆಗಿರಲಿ.. ಎದುರಾಳಿ ತಂಡ ಯಾವುದೇ ಇರಲಿ.. ಟೀಮ್ ಇಂಡಿಯಾ ಆಟಗಾರರು ಎಂತಹ ಸವಾಲುಗಳನ್ನು ಸ್ವೀಕರಿಸಲು ಕೂಡ ಸಿದ್ಧರಿರುತ್ತಾರೆ ಎಂಬುದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ನಂಬಿಕೆ.
ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಟೀಮ್ ಇಂಡಿಯಾಗೆ ಕಳೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಗೆಲುವು ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿದೆ.
ಅದು ಅಲ್ಲದೆ, ಟೀಮ್ ಇಂಡಿಯಾ ಸಂಘಟಿತ ಆಟವನ್ನಾಡುವ ಸಾಮಥ್ರ್ಯ ಹೊಂದಿದೆ. ಯುವ ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಜೊತೆಗೆ ಅನುಭವಿ ಹಾಗೂ ತಂಡದ ಹಿರಿಯ ಆಟಗಾರರು ಉತ್ತಮ ಫಾರ್ಮ್ ನಲ್ಲಿದ್ದಾರೆ. ಇದು ತಂಡಕ್ಕೆ ಮಾನಸಿಕವಾಗಿ ಹೆಚ್ಚು ಬಲವನ್ನು ತಂದಿದೆ.
ಹಾಗಂತ ನ್ಯೂಜಿಲೆಂಡ್ ತಂಡವನ್ನು ಲಘುವಾಗಿ ಪರಿಗಣಿಸುವ ಹಾಗಿಲ್ಲ. ಯಾಕಂದ್ರೆ ನ್ಯೂಜಿಲೆಂಡ್ ತಂಡ ಊಹಿಸಲು ಅಸಾಧ್ಯವಾದ ತಂಡ. ಅದ್ರಲ್ಲೂ ಪ್ರತಿಷ್ಠಿತ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ಯಾವಾಗಲೂ ಡಾರ್ಕ್ ಹಾರ್ಸ್. ಇದ್ರಿಂದ ಟೀಮ್ ಇಂಡಿಯಾ ಯಾವುದೇ ಹಂತದಲ್ಲೂ ಲಘುವಾಗಿ ಪರಿಗಣಿಸಿದ್ರೆ ಟೀಮ್ ಇಂಡಿಯಾಗೆ ಅಪಾಯ ತಪ್ಪಿದ್ದಲ್ಲ.
ಒಟ್ಟಿನಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ಪ್ರತಿಷ್ಠಿತ ಕಾದಾಟ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸಲಿದೆ.