ಕೊಹ್ಲಿ ನಾಯಕತ್ವ ಕಿತ್ತುಕೊಂಡ `ಐಸಿಸಿ ಟ್ರೋಫಿ’ Virat Kohli saaksha tv
ಭಾರತೀಯ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಇದೀಗ ಹೊಸ ಅಧ್ಯಾಯ ಆರಂಭವಾಗಿದೆ. ರೋಹಿತ್ ಶರ್ಮಾಗೆ ಏಕದಿನ ತಂಡದ ನಾಯಕತ್ವ ನೀಡುವ ಮೂಲಕ ವಿರಾಟ್ ಕೊಹ್ಲಿ ಯುಗ ಅಂತ್ಯವಾಗಿದೆ. ಇನ್ಮುಂದೆ ವಿರಾಟ್ ಕೇವಲ ರೆಡ್ ಬಾಲ್ ಕ್ರಿಕೆಟ್ ಗೆ ಮಾತ್ರ ನಾಯಕರಾಗಿ ಇರಲಿದ್ದಾರೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಟಿ 20 ಮತ್ತು ಏಕದಿನ ಕ್ರಿಕೆಟ್ ತಂಡದ ನಾಯಕರಾಗಿರಲಿದ್ದಾರೆ.
ಬಿಸಿಸಿಐನ ಈ ಸಡನ್ ನಿರ್ಧಾರದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸಾಬಾ ಕರೀಮ್ ಆಸಕ್ತಿಕರ ಹೇಳಿಕೆಗಳನ್ನು ನೀಡಿದ್ದಾರೆ. ಟಿ 20 ಕ್ರಿಕೆಟ್ ಕ್ಯಾಪ್ಟನ್ಸಿಯಿಂದ ಕೆಳಗಿಳಿದ ವಿರಾಟ್ ಕೊಹ್ಲಿ, ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ಮುಂದುವರೆಯಲು ಇಚ್ಛಿಸಿದ್ದರು ಎಂದು ಕರೀಂ ತಿಳಿಸಿದ್ದಾರೆ.
ಅಲ್ಲದೇ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿರುವುದರಿಂದಲೇ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲು ಪ್ರಮುಖ ಕಾರಣ ಎಂದು ಕರೀಂ ಅಭಿಪ್ರಾಯಪಟ್ಟಿದ್ದಾರೆ.
“ನಿಜ ಹೇಳಬೇಕೆಂದರೆ ಕೊಹ್ಲಿ ಅವರಿಂದ ಏಕದಿನ ಕ್ರಿಕೆಟ್ ನಾಯಕತ್ವವನ್ನು ಕಿತ್ತುಕೊಳ್ಳಲಾಗಿದೆ. ಟಿ20 ನಾಯಕತ್ವದಿಂದ ಕೆಳಗಿಳಿದಾಗ ಕೊಹ್ಲಿ ಏಕದಿನ ನಾಯಕತ್ವದ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ. ಅಂದರೆ ಅವರು ಏಕದಿನ ನಾಯಕನಾಗಿ ಮುಂದುವರಿಯಲು ಬಯಸಿದ್ದರು. ಆದರೆ ಕೊಹ್ಲಿ ನಾಯಕತ್ವದಲ್ಲಿ ಭಾರತ ಒಂದೇ ಒಂದು ಐಸಿಸಿ ಗೆದ್ದಿಲ್ಲ. ಅದೇ ಅವರಿಂದ ನಾಯಕತ್ವ ಕಿತ್ತುಕೊಳ್ಳಲು ಪ್ರಮುಖ ಕಾರಣವಾಗಿದೆ ಸಾಬಾ ಕರೀಂ ಪ್ರತಿಪಾದಿದ್ದಾರೆ.
ಇದಲ್ಲದೇ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಥವಾ ಬಿಸಿಸಿಐ ಅಧಿಕಾರಿಗಳು ನಾಯಕತ್ವದ ಬಗ್ಗೆ ಕೊಹ್ಲಿಯೊಂದಿಗೆ ಮಾತನಾಡಿರುತ್ತಾರೆ ಎಂದು ಕರೀಂ ಭಾವಿಸಿದ್ದಾರೆ. ದ್ರಾವಿಡ್ ಕೊಹ್ಲಿ ಜತೆ ಮಾತನಾಡಿ ಈ ನಿರ್ಧಾರ ಕೈಗೊಂಡಿರುತ್ತಾರೆ ಎಂದು ಕರೀಂ ಹೇಳಿದ್ದಾರೆ.
ಅಂದಹಾಗೆ ಕಳೆದ ಟಿ 20 ವಿಶ್ವಕಪ್ ವೇಳೆ ವಿರಾಟ್ ಕೊಹ್ಲಿ ಟಿ 20 ನಾಯಕತ್ವದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದರು. ಹೀಗಾಗಿ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಟಿ 20 ತಂಡದ ನಾಯಕರನ್ನಾಗಿ ನೇಮಿಸಿತು. ಪೂರ್ಣ ಪ್ರಮಾಣದ ನಾಯಕರಾದ ಬಳಿಕ ರೋಹಿತ್ ಸಾರಥ್ಯದಲ್ಲಿ ಟೀಂ ಇಂಡಿಯಾ ಕಿವೀಸ್ ವಿರುದ್ಧದ ಟಿ 20 ಸರಣಿಯನ್ನು ಜಯಸಿದೆ.









