ಕೋಚ್ ಬದಲಾದ್ರೆ ಮನಸ್ಥಿತಿ ಬದಲಾಗಲ್ಲ : ಹೀಗಂದಿದ್ಯಾಕೆ ವಿರಾಟ್..? Rahul dravid saaksha tv
ಕ್ರಿಕೆಟ್ ಬ್ರಹ್ಮ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ವಿರಾಟ್ ಕೊಹ್ಲಿ ಸೇನೆ ಕಿವೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಆ ಮೂಲಕ ವಿರಾಟ್ ಕೊಹ್ಲಿ-ರಾಹುಲ್ ದ್ರಾವಿಡ್ ಜುಗಲ್ ಬಂಧಿ ಶುಭಾರಂಭ ಮಾಡಿದೆ.
ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಅವರ ಅವಧಿ ಮುಗಿದ ಕಾರಣ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ದೋರ್ಣಾಚಾರ್ಯರಾದರು. ಪರಾಸ್ ಮಾಂಬ್ರೆ ಮತ್ತು ಟಿ ದಿಲೀಪ್ ಕ್ರಮವಾಗಿ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿದ್ದಾರೆ.
ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಟೀಂ ಇಂಡಿಯಾ ಕಿವೀಸ್ ವಿರುದ್ಧದ ನಡೆದ ಟಿ 20 ಸರಣಿಯನ್ನು ವಶಪಡಿಸಿಕೊಂಡಿತು. ನಂತರ ಎರಡು ಮ್ಯಾಚ್ ಗಳ ಟೆಸ್ಟ್ ಸರಣಿಯಲ್ಲಿ ಒಂದು ಮ್ಯಾಚ್ ಗೆದ್ದು ಭಾರತ ಸರಣಿ ಗೆದ್ದು ಬೀಗಿದೆ.
ಈ ಮಧ್ಯೆ ದ್ರಾವಿಡ್ ಮಾರ್ಗದರ್ಶನದಲ್ಲಿ ಮೊದಲ ಮ್ಯಾಚ್ ಆಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹೊಸ ಕೋಚ್ಗಳ ಅಡಿಯಲ್ಲೂ ನಮ್ಮ ಮನಸ್ಥಿತಿ ಮತ್ತು ಉದ್ದೇಶ ಹಿಂದಿನಂತೆಯೇ ಉಳಿಯಲಿದೆ ಎಂದಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್, ತಮ್ಮ ಮತ್ತು ಶಾಸ್ತ್ರಿ ಸಂಯೋಜನೆಯಲ್ಲಿ ಭಾರತ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದದ್ದನ್ನು ಸ್ಮರಿಸಿದರು.
ಅಲ್ಲದೆ ಆ ವಿಜಯಗಳನ್ನು ದೊಡ್ಡ ಯಶಸ್ಸು ಎಂದಿರುವ ಕೊಹ್ಲಿ, ಈ ಯಶಸ್ಸು ಮುಂಬರುವ ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲುವುದಕ್ಕೆ ನೆರವಾಗಲಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇನ್ನು ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಕಿವೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 372 ರನ್ ಗಳ ಜಯ ಸಾಧಿಸಿದೆ. ಆ ಮೂಲಕ ಎರಡು ಮ್ಯಾಚ್ ಗಳ ಸರಣಿಯಲ್ಲಿ ಟೀಂ ಇಂಡಿಯಾ ಗೆದ್ದುಕೊಂಡಿದೆ.








