ವಿರಾಟ್ ಕೊಹ್ಲಿ ಕಥೆ ಮುಗೀತಾ..?
ಛೇ ಈ ಕೊಹ್ಲಿಗೆ ಏನಾಗಿದೆ..? ಕೊಹ್ಲಿ ಯಾಕೆ ಈ ತರ ಆಡ್ತಾ ಇದ್ದಾನೆ..? ವಿರಾಟ್ ಕೊಹ್ಲಿ ಕಥೆ ಮುಗೀತಾ..? ಇದು ಕ್ರಿಕೆಟ್ ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆಗಳು.
ಹೌದು..! ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ದೇವರು.. ವಿಶ್ವ ಕ್ರಿಕೆಟ್ ನ ಬಾದ್ ಷಾ. ವಿಶ್ವ ಕ್ರಿಕೆಟ್ ನ ಕಿಂಗ್, ಕ್ರಿಕೆಟ್ ರಾಕ್ಷಸ ಒನ್ ಅಂಡ್ ಓನ್ಲಿ ವಿರಾಟ್ ಕೊಹ್ಲಿ.
ರನ್ ಮಿಷನ್ ಅಂತಾನೇ ಖ್ಯಾತಿ ಪಡೆದಿರುವ ವಿರಾಟ್ ಸದ್ಯ ಬ್ಯಾಡ್ ಫಾರ್ಮ್ ಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಶತಕಗಳ ಮೇಲೆ ಶತಕ ಸಿಡಿಸಿ ರನ್ ಸರದಾರನಾಗಿ ಮೆರೆದಾಡಿದ್ದ ವಿರಾಟ್ ಈಗ ಒಂದೂ ರನ್ ಗಳಿಸದೇ ಔಟ್ ಆಗುತ್ತಿದ್ದಾರೆ. ಪಿಚ್ ಎಂತಹದ್ದೇ ಇರಲಿ, ತಂಡ ಯಾವುದೇ ಇರಲಿ, ಕ್ರೀಸ್ ಗೆ ಕಚ್ಚಿನಿಂತು ಕೆಚ್ಚೆದೆಯ ಆಟವಾಡುತ್ತಿದ್ದ ಕ್ರಿಕೆಟ್ ರಾಕ್ಷಸ ಈಗ ಕ್ರೀಸ್ ನಲ್ಲಿ ನಿಲ್ಲುತ್ತಲೇ ಇಲ್ಲ.
ಒಂದು ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿ ಸಾರ್ವಕಾಲಿಕ ದಾಖಲೆ ಬರೆದಿರುವ ವಿರಾಟ್, ಈಗ ವರ್ಷ ಕಳೆದರೂ ಒಂದು ಸೆಂಚೂರಿ ದಾಖಲಿಸಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಸಾಮಾನ್ಯವಾಗಿಯೇ ಬೇಸರ ತಂದಿದೆ. ಅದರಲ್ಲೂ ವಿರಾಟ್ ಅಭಿಮಾನಿಗಳಿಗೆ ಕೊಹ್ಲಿಯ ಈ ಪ್ರದರ್ಶನ ನಿದ್ದೆಗೆಡಿಸಿದೆ. ಇಷ್ಟು ದಿನ ಕಾಲರ್ ಮೇಲೆ ಹಾಕಿಕೊಂಡು ಓಡಾಡುತ್ತಿದ್ದ ಚೀಕೂ ಅಭಿಮಾನಿಗಳು ಈಗ ಬಟ್ಟೆಬರೆ ಹರಿದುಕೊಳ್ಳುತ್ತಿದ್ದಾರೆ.
ಸೊನ್ನೆ ಸುತ್ತುವುದರಲ್ಲೂ ದಾಖಲೆ
ಹೌದು..! ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ. ಐದು ಪಂದ್ಯಗಳ ಸರಣಿಯ ಅಂಗವಾಗಿ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ 20 ಮ್ಯಾಚ್ ನಲ್ಲಿ ಐದು ಎಸೆತಗಳನ್ನು ಎದುರಿಸಿದ ವಿರಾಟ್ ಒಂದೂ ರನ್ ಗಳಿಸಿದೇ ಔಟ್ ಆದ್ರು. ಈ ಮೂಲಕ ಭಾರತದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ 13 ಬಾರಿಯ ಡಕ್ ಔಟ್ ದಾಖಲೆಯನ್ನ ವಿರಾಟ್ ಅಳಿಸಿ ಹಾಕಿದ್ದಾರೆ.
ಅಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 14 ಬಾರಿ ಡಕೌಟ್ ಆದ ಟೀಂ ಇಂಡಿಯಾದ ಕ್ಯಾಪ್ಟನ್ ಎಂಬ ಬೇಡವಾದ ದಾಖಲೆಯನ್ನ ಕೊಹ್ಲಿ ನಿರ್ಮಿಸಿದ್ದಾರೆ.
ನಿನ್ನೆಯ ಮ್ಯಾಚ್ ನಲ್ಲಿ ಐದು ಎಸೆತಗಳನ್ನ ಎದುರಿಸಿದ ವಿರಾಟ್ ಆದಿಲ್ ರಶೀದ್ ಅವರ ಬೌಲಿಂಗ್‍ನಲ್ಲಿ ಭಾರಿ ಹೊಡೆತಕ್ಕೆ ಪ್ರಯತ್ನಿಸಿ ಕ್ರಿಸ್ ಜೋರ್ಡಾನ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ರು. ಇದರೊಂದಿಗೆ 14 ಬಾರಿ ಡಕೌಟ್ ಆದ ಟೀಂ ಇಂಡಿಯಾ ನಾಯಕ ಎಂಬ ದಾಖಲೆ ಬರೆದರು.
ಈ ಹಿಂದೆ ಮಹೇಂದ್ರ ಸಿಂಗ್ ಧೋನಿ 11 ಬಾರಿ, ಕಪಿಲ್ ದೇವ್ 10 ಬಾರಿ ಮತ್ತು ಮೊಹಮ್ಮದ್ ಅಜರುದ್ದೀನ್ 8 ಬಾರಿ ಡಕೌಟ್ ಆಗಿದ್ದಾರೆ.
ಅಂದಹಾಗೆ ಟೀಂ ಇಂಡಿಯಾ ನಾಯಕ ಕೊಹ್ಲಿಯ ಈ ಪ್ರದರ್ಶನ, ಕೊಹ್ಲಿ ಕಥೆ ಮುಗೀತಾ ಎಂಬ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿದೆ.