ತವರಿನಲ್ಲಿ ಸತತ 10 ಸರಣಿ ಗೆದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿ…ಅಳಿಸಿ ಹೋಯ್ತು ಸ್ಟೀವ್ ವಾ ದಾಖಲೆ.. ಸ್ಮಿತ್, ಪಾಂಟಿಂಗ್ ಮುಂದಿನ ಟಾರ್ಗೆಟ್…!
ಶತಕ ದಾಖಲಿಸಲಿಲ್ಲ.. ರನ್ ಗಳು ಹರಿದು ಬರಲಿಲ್ಲ. ಆದ್ರೆ ವಿರಾಟ್ ಕೊಹ್ಲಿ ಆಡಿದ್ದೇಲ್ಲಾ ದಾಖಲೆಗಳ ಪುಟಗಳಲ್ಲಿ ಸೇರಿಕೊಳ್ಳುತ್ತಿವೆ.
ಹೌದು, 2020ರಲ್ಲಿ ಮತ್ತು 2021ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ ನಿಂದ ರನ್ ಗಳು ಹರಿದುಬರಲಿಲ್ಲ. ಶತಕದ ಸಂಭ್ರಮವೂ ಇರಲಿಲ್ಲ. ಕೆಟ್ಟ ಫಾರ್ಮ್ ನಲ್ಲಿದ್ರೂ ವಿರಾಟ್ ಕೊಹ್ಲಿ ನಾಯಕನಾಗಿ ತಂಡವನ್ನು ಯಶಸ್ಸಿಯಾಗಿ ಮುನ್ನಡೆಸಿದ್ದಾರೆ.
ಕೇವಲ ನಾಲ್ಕೈದು ಪಂದ್ಯಗಳಲ್ಲಿ ಕೋಹ್ಲಿಯಂತಹ ಆಟಗಾರರನ್ನು ಅಳತೆ ಮಾಡುವುದು ಸಮಂಜಸವೂ ಅಲ್ಲ. ಕೊಹ್ಲಿ ಎಂಥಾ ಆಟಗಾರ ಎಂಬುದನ್ನು ಜಗತ್ತಿಗೆ ಈಗಾಗಲೇ ಪರಿಚಯಿಸಿದ್ದಾರೆ.
ಅದೇನೇ ಇರಲಿ, ನಾಯಕನಾಗಿ ವಿರಾಟ್ ಕೊಹ್ಲಿ ತವರಿನಲ್ಲಿ ಸತತ ಹತ್ತು ಸರಣಿ ಗೆದ್ದ ದಾಖಲೆಯನ್ನು ಹೊಂದಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆಯನ್ನು ಸಮಗೊಳಿಸಿದ್ದಾರೆ. ಇಲ್ಲಿಯ ತನಕ ಈ ದಾಖಲೆ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. ಇದೀಗ ಅದಕ್ಕೆ ವಿರಾಟ್ ಕೊಹ್ಲಿಯ ಹೆಸರು ಕೂಡ ಸೇರಿಕೊಂಡಿದೆ.
ಅಲ್ಲದೆ ತವರಿನಲ್ಲಿ ಸತತ ಹತ್ತು ಸರಣಿ ಗೆದ್ದಿದ್ದ ರಿಕಿ ಪಾಂಟಿಂಗ್ ಸಾಲಿಗೂ ಸೇರಿಕೊಂಡಿದ್ದಾರೆ ವಿರಾಟ್ ಕೊಹ್ಲಿ
ಹಾಗೇ ಇಂಗ್ಲೆಂಡ್ ವಿರುದ್ಧ 3-1ರಿಂದ ಸರಣಿ ಗೆದ್ದಾಗ ವಿರಾಟ್ ಹೆಸರಿಗೆ ಮತ್ತೊಂದು ದಾಖಲೆಯೂ ಅಂಟಿಕೊಂಡಿದೆ. ನಾಯಕನಾಗಿ ತವರಿನಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ದಾಖಲೆ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಹೆಸರಿನಲ್ಲಿದೆ. ಗ್ರೇಮ್ ಸ್ಮಿತ್ ಅವರು 30 ಪಂದ್ಯಗಳನ್ನು ತವರಿನಲ್ಲಿ ಗೆದ್ದಿದ್ದಾರೆ.
ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ. ಪಾಂಟಿಂಗ್ 29 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದಾರೆ.
ಇದೀಗ ಮೂರನೇ ಸ್ಥಾನವನ್ನು ವಿರಾಟ್ ಕೊಹ್ಕಿ ಆಕ್ರಮಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಗೆಲುವು ವಿರಾಟ್ ಅವರ 23ನೇ ಟೆಸ್ಟ್ ಗೆಲುವು ಆಗಿದೆ. ಈ ಮೂಲಕ ಸ್ಟೀವ್ ವಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಸ್ಟೀವ್ ವಾ ಅವರು 22 ಟೆಸ್ಟ್ ಪಂದ್ಯಗಳನ್ನು ತವರಿನಲ್ಲಿ ಗೆದ್ದಿದ್ದರು.
ಒಟ್ಟಿನಲ್ಲಿ ವಿರಾಟ್ ಕೊಹ್ಲಿಯವರ ನಾಯಕತ್ವವನ್ನು ಯಾರು ಎಷ್ಟೇ ಟೀಕೆ ಮಾಡಲಿ.. ಆದ್ರೆ ತಂಡವನ್ನು ಗೆಲುವಿನ ದಡ ಸೇರಿಸಿ ಯಶಸ್ವಿ ನಾಯಕನಾಗಿ ಮುಂದುವರಿಯುತ್ತಿದ್ದಾರೆ. ಬಹುಶಃ ಮುಂದಿನ ದಿನಗಳಲ್ಲಿ ಪಾಂಟಿಂಗ್ ಮತ್ತು ಸ್ಮಿತ್ ದಾಖಲೆಯನ್ನು ವಿರಾಟ್ ಅಳಿಸಿ ಹಾಕೋದು ಗ್ಯಾರಂಟಿ.