IND v BAN: ಭಾರತ v ಬಾಂಗ್ಲಾದೇಶ ಪಂದ್ಯದಲ್ಲಿ ವಿರಾಟ್ v ಶಕೀಬ್ ಮುಖಾಮುಖಿ…
Virat vs Shakib in India vs Bangladesh match..
ಏಷ್ಯಾಕಪ್-2023ನ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿಂದು ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಹಣಾಹಣಿ ನಡೆಸುತ್ತಿದ್ದು, ಈ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹಾಗೂ ಸ್ಟಾರ್ ಆಲ್ರೌಂಡರ್ ಶಕೀಬ್-ಅಲ್-ಹಸನ್ ನಡುವಿನ ಮುಖಾಮುಖಿ ಭಾರೀ ಕುತೂಹಲ ಮೂಡಿಸಿದೆ.
ಏಕದಿನ ಕ್ರಿಕೆಟ್‌ನಲ್ಲಿ ಇಬ್ಬರು ಸ್ಟಾರ್ ಆಟಗಾರರು ಈ ಹಿಂದೆಯೂ ಸಹ ಮುಖಾಮುಖಿಯಾಗಿದ್ದು, ಉಭಯ ಆಟಗಾರರು ತಮ್ಮದೇ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಶಕೀಬ್, 14 ಪಂದ್ಯಗಳಲ್ಲಿ 5 ಬಾರಿ ವಿರಾಟ್ ಕೊಹ್ಲಿ ಅವರನ್ನ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರೆ. ಬಾಂಗ್ಲಾದೇಶ ತಂಡದ ನಾಯಕನ ವಿರುದ್ಧ ಮೇಲುಗೈ ಸಾಧಿಸಿರುವ ಕಿಂಗ್ ಕೊಹ್ಲಿ, 49.80ರ ಸರಾಸರಿಯಲ್ಲಿ ರನ್ ಕಲೆಹಾಕುವ ಮೂಲಕ ಮಿಂಚಿದ್ದಾರೆ.
ಆದರೆ ಪ್ರಸಕ್ತ ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದು, ಪಾಕಿಸ್ತಾನದ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಮಿಂಚಿದ್ದರು. ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಕೂಡ ʼಚೇಸ್ ಮಾಸ್ಟರ್ʼ ಕೊಹ್ಲಿ ಬ್ಯಾಟಿಂಗ್‌ನಿಂದ ಅಬ್ಬರಿಸುವ ನಿರೀಕ್ಷೆ ಇದೆ.
ಮತ್ತೊಂದೆಡೆ ತಮ್ಮದೇ ಬೌಲಿಂಗ್ ಚಾಣಾಕ್ಷತನವನ್ನ ಹೊಂದಿರುವ ಆಲ್ರೌಂಡರ್ ಶಕೀಬ್-ಅಲ್-ಹಸನ್, ಹಲವು ಬ್ಯಾಟರ್‌ಗಳ ಆಟಕ್ಕೆ ಕಡಿವಾಣ ಹಾಕಿದ್ದಾರೆ. ಹೀಗಾಗಿ ಭಾರತದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ತಮ್ಮ ಸ್ಪಿನ್ ಕೈಚಳಕ ತೋರುವ ತವಕದಲ್ಲಿ ಇಂದಿನ ಪಂದ್ಯಕ್ಕೆ ಸಜ್ಜಾಗಿದ್ದಾರೆ.
ಆದರೆ ಭಾರತದ ಪಾಲಿಗೆ ಇದು ಅನೌಪಚಾರಿಕ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಒಂದೊಮ್ಮೆ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಕಿಂಗ್ ಕೊಹ್ಲಿ ಕಣಕ್ಕಿಳಿದರೆ ವಿರಾಟ್ ಹಾಗೂ ಶಕೀಬ್ ನಡುವಿನ ಕಾಳಗ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.








