ಚೀನಾ ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ಕ್ರೀಡಾಪಟುಗಳಿಂದ ಗೌರವ ನಮನ
ಭಾರತ ಮತ್ತು ಚೀನಾ ಗಡಿಯಲ್ಲಿ ನಡೆದ ರಕ್ತಪಾತದಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಈ ಕುತಂತ್ರ ಕೃತ್ಯದ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿವೆ. ರಾಜಕಾರಣಿಗಳು, ಸಿನಿ ನಟಿಯರು ಸೇರಿದಂತೆ ಜನಸಾಮಾನ್ಯರು ಕೂಡ ತಮ್ಮ ಸಾಮಾಜಿಕ ಜಾಲ ತಾಣದ ಖಾತೆಯಲ್ಲಿ ಹುತಾತ್ಮ ಯೋಧರಿಗೆ ನಮನಗಳನ್ನು ಸಲ್ಲಿಸಿದ್ದಾರೆ.
ಹಾಗೇ, ಟೀಮ್ ಇಂಡಿಯಾ ಆಟಗಾರರು ಕೂಡ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದಾರೆ. ಪೂರ್ವ ಲಡಾಖ್‍ನಲ್ಲಿ ಚೀನಾ ಸೈನಿಕರ ಜೊತೆಗಿನ ಘರ್ಷಣೆಯಲ್ಲಿ ಭಾರತದ 20 ಮಂದಿ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ಚೀನಾಗೆ ಪ್ರತಿಕಾರವಾಗಿ 43 ಚೀನಿ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಗಾಲ್ವಾನ್ ಕಣಿವೆಯಲ್ಲಿ ನಮ್ಮ ದೇಶವನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ್ದ ನಮ್ಮ
ಹೆಮ್ಮೆಯ ಸೈನಿಕರಿಗೆ ಗೌರವವನ್ನು ಸಲ್ಲಿಸುತ್ತಿದ್ದೇನೆ. ಸೈನಿಕರ ನಿಸ್ವಾರ್ಥ ಸೇವೆ ಮತ್ತು ಧೈರ್ಯದ ಮುಂದೆ ಯಾರು ಏನು ಅಲ್ಲ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನು ರೋಹಿತ್ ಶರ್ಮಾ ಅವರು ರಿಯಲ್ ಹೀರೋಗಳಿಗೆ ಸೆಲ್ಯೂಟ್. ದೇಶದ ಗಡಿ ರಕ್ಷಣೆಗಾಗಿ ಹುತಾತ್ಮರಾದ ಯೋಧರಿಗೆ ಅಂತಿಮ ನಮನ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಟ್ವಿಟರ್‍ನಲ್ಲಿ ಬರೆದುಕೊಂಡಿದ್ದಾರೆ.
ಹಾಗೇ ಯುವರಾಜ್ ಸಿಂಗ್, ಬೈಚುಂಗ್ ಭೂಟಿಯಾ ಸೇರಿದಂತೆ ಕ್ರೀಡಾಪಟುಗಳು ಹುತಾತ್ಮ ಯೋಧರ ಬಲಿದಾನಕ್ಕೆ ಸಂತಾಪ ಸೂಚಿಸಿದ್ದಾರೆ.
ಮತ್ತೊಂದೆಡೆ ಭೈಚುಂಗ್ ಭೂಟಿಯಾ ತನ್ನ ಟ್ವೀಟರ್‍ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಚೀನಾ ಈ ಹಿಂದೆಯೇ ಭಾರತದಲ್ಲಿರುವ ತಮ್ಮ ದೇಶದ ನಾಗರೀಕರನ್ನು ವಾಪಸ್ ಬರುವಂತೆ ಹೇಳಿತ್ತು. ಗಡಿ ಪ್ರದೇಶದಲ್ಲಿ ಭಾರತದ ಸೈನಿಕರನ್ನು ಕೊಂದಿರುವುದು ಪೂರ್ವನಿಯೋಜಿತವಾದ ಸಂಚು. ಸರ್ಕಾರ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು. ಚೀನಾದ ಮುಂದೆ ತಲೆಬಾಗಬಾರದು ಎಂದಿದ್ದಾರೆ.









