ಚಾಮರಾಜನಗರ : ಹೆಚ್.ವಿಶ್ವನಾಥ್ ಅವರು ಬಿಜೆಪಿಯ ನಾಯಕರಾಗಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಮಾತನಾಡುವ ಮುನ್ನ ಪಕ್ಷ ನಿಲುವೇನು ಎಂಬುದನ್ನು ಯೋಚಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ಬಗ್ಗೆ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸುರೇಶ್ ಕುಮಾರ್, ಟಿಪ್ಪು ಸುಲ್ತಾನ್ ಕುರಿತು ಮಾಜಿ ಸಚಿವ ವಿಶ್ವನಾಥ್ ಅವರದ್ದು ವೈಯಕ್ತಿಕ ಅಭಿಪ್ರಾಯವೇ ಹೊರತು ಬಿಜೆಪಿಯ ಅಭಿಪ್ರಾಯವಲ್ಲ. ವಿಶ್ವನಾಥ್ ಅವರಿಗೆ ಮಾತನಾಡುವ ಸ್ವಾತಂತ್ರ್ಯವಿದೆ, ಆದರೆ ಬಿಜೆಪಿಯ ನಾಯಕರಾಗಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಮಾತನಾಡುವ ಮುನ್ನ ಪಕ್ಷ ನಿಲುವೇನು ಎಂಬುದನ್ನು ಯೋಚಿಸಬೇಕು ಎಂದು ಟಾಂಗ್ ನೀಡಿದ್ದಾರೆ. ಒಂದು ಬಾರಿ ಪಕ್ಷಕ್ಕೆ ಸೇರಿದ ಮೇಲೆ ಇಲ್ಲಿನ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸಬೇಕು. ಹೆಚ್.ವಿಶ್ವನಾಥ್ ಪ್ರಬುದ್ಧರಿದ್ದಾರೆ. ಈ ರೀತಿ ಮಾತನಾಡುವಾಗ ಯಾವ ಪಕ್ಷದಲ್ಲಿದ್ದೇನೆ ಅನ್ನುವುದನ್ನು ಯೋಚನೆ ಮಾಡಿ ಮಾತನಾಡಿದರೆ ಒಳಿತು ಎಂದು ಪರೋಕ್ಷವಾಗಿ ವಿಶ್ವನಾಥ್ ಗೆ ಎಚ್ಚರಿಕೆ ಕೊಟ್ಟರು.
ಇದೇ ವೇಳೆ ವಿಶ್ವನಾಥ್ ಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ ಸುರೇಶ್ ಕುಮಾರ್, ವಿಶ್ವನಾಥ್ ಅವರಿಗೆ ಅನುಭವವಿದೆ. ಆದರೆ ಅವರು ಸಚಿವರಾಗುವುದು ಕಾನೂನಿಗೆ ಬಿಟ್ಟ ವಿಚಾರ. ಕಾನೂನು ಪಂಡಿತರು ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.









