ಚೆನ್ನೈ : ಕಳೆದ ಮೂರು ತಿಂಗಳಿನಿಂದ ಜರ್ಮನಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ ವಿಶ್ವ ಪ್ರಸಿದ್ಧ ಚೆಸ್ ಚ್ಯಾಂಪಿಯನ್ ವಿಶ್ವನಾಥನ್ ಆನಂದ್ ಇಂದು ಭಾರತಕ್ಕೆ ಆಗಮಿಸಲಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದುದರಿಂದ ಮೂರು ತಿಂಗಳ ಕಾಲ ಜರ್ಮನಿಯಲ್ಲಿ ಸಿಲುಕಿಕೊಂಡ ನಂತರ ಇದೀಗ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಶನಿವಾರ ತಡರಾತ್ರಿ ಭಾರತ ತಲುಪಲಿದ್ದಾರೆ.
ಆನಂದ್ ಇಂದು ಭಾರತಕ್ಕೆ ಹಿಂದಿರುಗಲಿದ್ದಾರೆ ಎಂದು ಚೆಸ್ ಮಾಸ್ಟರ್ ಅವರ ಪತ್ನಿ ಅರುಣಾ ಅವರು ಮಾಧ್ಯಮಗಳಿಗೆ ಶನಿವಾರ ತಿಳಿಸಿದ್ದಾರೆ. ಜರ್ಮನಿಯ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಿಂದ ಶುಕ್ರವಾರ ರಾತ್ರಿ ಹೊರಟಿರುವ ವಿಶ್ವನಾಥನ್ ಆನಂದ್ ಇಂದು ರಾತ್ರಿ 1,15 ಕ್ಕೆ ಬೆಂಗಳೂರಿಗೆ ತಲುಪಲಿದ್ದಾರೆ. ನಂತರ ಅವರು ಕರ್ನಾಟಕ ಸರ್ಕಾರ ವಿಧಿಸಿರುವ ನಿಯಮಗಳ ಪ್ರಕಾರ 14 ದಿನಗಳ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಫ್ರಾಂಕ್‌ಫರ್ಟ್‌ನಿಂದ ವಿಮಾನಗಳು ನವದೆಹಲಿ ಮತ್ತು ಬೆಂಗಳೂರಿನಲ್ಲಿ ಮಾತ್ರ ಇಳಿಯಲಿದ್ದು, ವಿಶ್ವನಾಥನ್ ಆನಂದ್ ಕೊರೋನಾ ಸೋಂಕು ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರ ವಿಧಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಶಿಷ್ಟಾಚಾರದಂತೆ ಕ್ವಾರಂಟೈನ್ ನ ಎಲ್ಲಾ ನಿಯಮಗಳನ್ನು ಪಾಲಿಸಿದ ನಂತರವೇ ಅವರು ಚೆನ್ನೈ ಗೆ ತೆರಳಲಿದ್ದಾರೆ .








