ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಯಂತ್ರೋಪಕರಣಗಳು ಅಥವಾ ವಿವಿಧ ಸೇವೆಗಳ ಮೂಲ ಮಾದರಿ (ಪ್ರೋಟೋಟೈಪ್) ಯೋಜನೆಯನ್ನು ಅಭಿವೃದ್ಧಿಪಡಿಸುವುದು ಕಡ್ಡಾಯವಾಗಲಿದೆ.
ಈ ಯೋಜನೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಡಿಜಿಟಲ್ ಅಪ್ಲಿಕೇಶನ್‌ನ್ನು ಅಭಿವೃದ್ಧಿಪಡಿಸಲಾಗುವುದು ಎಂದು VTU ಕುಲಪತಿ ಪ್ರೊ. ಎಸ್. ವಿದ್ಯಾ ಶಂಕರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಕೈಗೊಳ್ಳುವ ಯೋಜನೆಗಳ ವಿವರ, ಮಾರ್ಗದರ್ಶಕರ ಅಭಿಪ್ರಾಯ, ಹಂತ ಹಂತದ ಪ್ರಗತಿ ಹಾಗೂ ಅಂತಿಮ ಫಲಿತಾಂಶಗಳನ್ನು ಈ ಅಪ್ಲಿಕೇಶನ್ ಮೂಲಕ ಮೇಲ್ವಿಚಾರಣೆ ಮಾಡುವ ಯೋಜನೆ ರೂಪಿಸಲಾಗಿದೆ.
ಈ ಹೊಸ ಕ್ರಮದ ಉದ್ದೇಶವನ್ನು ವಿವರಿಸಿದ ಕುಲಪತಿ, ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗ ಹುಡುಕುವವರಾಗಿ ಅಲ್ಲ, ಉದ್ಯಮಶೀಲ ಚಿಂತನೆ ಹೊಂದಿರುವ ಉದ್ಯಮಿಗಳಾಗಿ ರೂಪಿಸುವುದೇ ನಮ್ಮ ಆಶಯ ಎಂದು ಹೇಳಿದ್ದಾರೆ. ಪ್ರಾಯೋಗಿಕ ಜ್ಞಾನ, ನಾವೀನ್ಯತೆ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯ ಹೆಚ್ಚಿಸಲು ಈ ಕ್ರಮ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
VTU ನ ಈ ನಿರ್ಧಾರದಿಂದಾಗಿ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕ ಕೌಶಲ್ಯ ಗಳಿಸುವ ಅವಕಾಶ ಹೆಚ್ಚುವುದರ ಜೊತೆಗೆ, ಸ್ಟಾರ್ಟ್‌ಅಪ್ ಸಂಸ್ಕೃತಿಗೂ ಬಲ ಸಿಗಲಿದೆ ಎಂದು ಶಿಕ್ಷಣ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.








