ವಿಜಯಪುರ ಜಿಲ್ಲೆಯ ಚಡಚಣ ಪ್ರದೇಶದಲ್ಲಿ ಜಿಪಿಎಸ್ ಟ್ರ್ಯಾಕರ್, ಕ್ಯಾಮರಾ ಹಾಗೂ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಿರುವ ರಣಹದ್ದು ಪತ್ತೆಯಾಗಿರುವುದು ಭಾರೀ ಆತಂಕ ಮೂಡಿಸಿದೆ.
ರಣಹದ್ದಿನ ಕಾಲಿನಲ್ಲಿ ಗುರುತು ಸಂಖ್ಯೆಯಿರುವ ಟ್ಯಾಗ್ ಕೂಡ ಕಂಡುಬಂದಿದ್ದು, ಇದು ಸಾಮಾನ್ಯ ವನ್ಯಜೀವಿ ಪ್ರಕರಣವಲ್ಲ ಎನ್ನುವ ಅನುಮಾನಗಳನ್ನು ಹುಟ್ಟುಹಾಕಿದೆ.
ರಣಹದ್ದು ಕಂಡ ಕೂಡಲೇ ಸ್ಥಳೀಯ ಸಾರ್ವಜನಿಕರು ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ರಣಹದ್ದನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ವಿಜಯಪುರ ನಗರದ ಝಳಕಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಪತ್ತೆಯಾದ ರಣಹದ್ದಿಗೆ ಜಿಪಿಎಸ್, ಟ್ರ್ಯಾಕರ್ ಹಾಗೂ ಕ್ಯಾಮರಾ ಅಳವಡಿಸಲಾಗಿರುವುದು ಯಾವ ಉದ್ದೇಶಕ್ಕಾಗಿ? ಇದು ವನ್ಯಜೀವಿ ಅಧ್ಯಯನದ ಭಾಗವೇ ಅಥವಾ ಬೇರೆ ಯಾವುದೇ ಚಟುವಟಿಕೆಯೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದ್ದು, ಅಧಿಕೃತ ಹೇಳಿಕೆ ಹೊರಬಿದ್ದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ.








