ನವದೆಹಲಿ, ಸೆ.15: ಸುಪ್ರೀಂ ಕೋರ್ಟ್ (Supreme court) ಇಂದು (ಸೆಪ್ಟೆಂಬರ್ 15) ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ (Waqf Amendment Act 2025) ಕೆಲವು ನಿಬಂಧನೆಗಳಿಗೆ ತಡೆ ನೀಡಿದೆ. ಮೊದಲನೆಯದು ವಕ್ಫ್ ರಚಿಸಲು ವ್ಯಕ್ತಿಯು ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಅನುಸರಿಸಿದ್ದರಬೇಕು ಎಂಬ ಷರತ್ತು. ಎರಡನೇಯದು ಜಿಲ್ಲಾಧಿಕಾರಿಗೆ ಆಸ್ತಿಯನ್ನು ವಕ್ಫ್ ಆಗಿ ಗುರುತಿಸಿರುವ ಅಧಿಕಾರ ನೀಡುವ ಅಂಶವನ್ನು ತಡೆ ನೀಡಿದೆ.
ವಕ್ಫ್ (ತಿದ್ದುಪಡಿ) ಕಾಯ್ದೆ- 2025ರ ಮೂರು ಪ್ರಮುಖ ವಿಚಾರಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಾದ ಆಲಿಸಿದ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರು ಇದ್ದ ದ್ವಿಸದಸ್ಯ ಪೀಠವು ಈ ನಿಬಂಧನೆಗಳಿಗೆ ತಡೆ ನೀಡಿದೆ.
ವಕ್ಫ್ ಮಾಡಲು ಓರ್ವ ವ್ಯಕ್ತಿಯು ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಅನುಯಾಯಿಯಾಗಿರಬೇಕು ಎಂಬ ಸೆಕ್ಷನ್ 3(1)(r) ನಲ್ಲಿರುವ ನಿಬಂಧನೆಯನ್ನು, ರಾಜ್ಯ ಸರ್ಕಾರಗಳು ಈ ಷರತ್ತಿನ ನಿರ್ಣಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವವರೆಗೆ ತಡೆಹಿಡಿಯಲಾಗಿದೆ.
ವಕ್ಫ್ ಆಸ್ತಿಯನ್ನು ಗುರುತಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಸರ್ಕಾರದಿಂದ ನಿಯೋಜಿಸಲಾಗಿರುವ ಅಧಿಕಾರಿಗೆ ನೀಡಿರುವ ಅಂಶಕ್ಕೂ ತಡೆಯನ್ನು ನೀಡಲಾಗಿದೆ. ಇದು ಅಧಿಕಾರಿಗಳ ಪ್ರತ್ಯೇಕತೆಯನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇನ್ನು, ವಕ್ಫ್ ಮಂಡಳಿಗೆ ಮುಸ್ಲಿಮೇತರ ಸದಸ್ಯರ ನಾಮನಿರ್ದೇಶನಕ್ಕೆ ಅವಕಾಶ ನೀಡುವ ನಿಬಂಧನೆಗೆ ತಡೆ ನೀಡಲಾಗಿಲ್ಲ. ಆದರೆ, ಸಾಧ್ಯವಾದಷ್ಟು ಮಟ್ಟಿಗೆ, ಮಂಡಳಿಯ ಪದನಿಮಿತ್ತ ಸದಸ್ಯರು ಮುಸ್ಲಿಂ ವ್ಯಕ್ತಿಯಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.








