ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅನೇಕ ಗ್ರಾಮಗಳ ರೈತರ ಜಮೀನಿನ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಹೆಸರು ನಮೂದಾಗಿದೆ. ಈ ಘಟನೆಯು ರೈತರಲ್ಲಿ ಆತಂಕವನ್ನು ಉಂಟುಮಾಡಿದ್ದು, ಸಾಲ ಪಡೆಯಲು, ಜಮೀನು ಮಾರಾಟ ಮತ್ತು ಖರೀದಿಗೆ ತೊಂದರೆಯಾಗಿದೆ.
ಶ್ರೀರಂಗಪಟ್ಟಣ ತಾಲೂಕಿನಲ್ಲಿ ಒಟ್ಟು 70ಕ್ಕೂ ಹೆಚ್ಚು ಭೂಮಿಗಳ ಪಹಣಿಯಲ್ಲಿ ವಕ್ಫ್ ಮಂಡಳಿಯ ಹೆಸರು ಇದೆ. ಕಿರಂಗೂರು, ಕೆ.ಶೆಟ್ಟಹಳ್ಳಿ, ಬಾಬಾರಾಯನಕೊಪ್ಪಲು, ದರಸಕುಪ್ಪೆ ಗ್ರಾಮಗಳ 50ಕ್ಕೂ ಹೆಚ್ಚು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಮಂಡಳಿ ಅಂತ ನಮೂದಾಗಿದೆ.
ರೈತರ ಆಕ್ರೋಶ:ಪಹಣಿಯಲ್ಲಿನ ಸ್ವಾಧೀನದಾರರ ಕಾಲಂನಲ್ಲಿ ರೈತರ ಹೆಸರಿದ್ದರೂ, ಋಣ ಕಾಲಂನಲ್ಲಿ ವಕ್ಫ್ ಮಂಡಳಿ ಹೆಸರು ಇದೆ. ಸಾಮಾನ್ಯವಾಗಿ ಜಮೀನಿನ ಮೇಲೆ ಸಾಲ ತೆಗೆದುಕೊಂಡರೆ ಅಥವಾ ನಂಬಿಕೆ ಕ್ರಯ ಮಾಡಿಸಿದರೆ ಮಾತ್ರ ಋಣ ಕಾಲಂನಲ್ಲಿ ಆ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರು ನಮೂದಿಸಲಾಗುತ್ತದೆ. ವಕ್ಫ್ ಮಂಡಳಿ ಹೆಸರು ನಮೂದಾಗಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಎಲ್ಲೂ ಸಾಲ ಸಿಗದೆ, ಜಮೀನು ಮಾರಾಟ ಮತ್ತು ಕೊಂಡುಕೊಳ್ಳಲೂ ಆಗದೆ ಪರದಾಡುತ್ತಿದ್ದಾರೆ.
ಧರಣಿ:ಈ ಯಡವಟ್ಟಿಗೆ ಅನ್ನದಾತರು ಕಂಗಾಲಾಗಿದ್ದಾರೆ. ಹೀಗಾಗಿ, ರೈತರ ಪರವಾಗಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ರೈತಸಂಘ, ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು, ಜನವರಿ 20ರಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿವೆ. ಅನ್ನದಾತರು ಜಾನುವಾರುಗಳೊಂದಿಗೆ ಬೀದಿಗಿಳಿಯಲಿದ್ದಾರೆ.
ಈ ವಿವಾದವು ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ರಾಜಕೀಯ ವಾಗ್ಯುದ್ಧಕ್ಕೂ ಕಾರಣವಾಗಿದೆ. ರೈತರು ಮತ್ತು ವಿವಿಧ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಹೇಗೆ ಪರಿಹಾರವಾಗುತ್ತದೆ ಎಂಬುದು ಕುತೂಹಲದ ವಿಷಯವಾಗಿದೆ.








