ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಭಾರತೀಯ ಮೂಲದ ಅಮೆರಿಕನ್ ಹೃದ್ರೋಗ ತಜ್ಞರೊಬ್ಬರು ಕೊರೊನಾ ಸೋಂಕು ಮಾರಕವಾಗಿದ್ದು, ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬೇಡಿ ಎಂದು ಪತ್ರವನ್ನು ಬರೆದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕಾದ ಟೆನ್ನೆಸ್ಸೀಯಲ್ಲಿ ನೆಲೆಸಿರುವ ವೈದ್ಯ ಡಾ.ಇಂದ್ರಾನಿಲ್ ಬಸು ರೇ ಎನ್ನುವವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದು, ಎದುರಾಗಲಿರುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ವಿಷಯದಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಭಾರತವು ಅದೃಷ್ಟಶಾಲಿಯಾಗಬಹುದು ಏಕೆಂದರೆ ಇಲ್ಲಿ ಹರಡಿರುವ ವೈರಸ್ ಸ್ಟ್ರೇನ್ ಭಿನ್ನವಾಗಿದ್ದು ಇದು ಗಂಭೀರವಾಗುವ ಮೊದಲೇ ತಡೆಯಬಹುದು ಎಂದಿದ್ದಾರೆ.
ಪಶ್ಚಿಮ ಬಂಗಾಳವು ಅಸಾಧಾರಣ ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಿಂದ ಕೂಡಿದ್ದು, ಒಂದು ನಿರ್ದಿಷ್ಟ ಪ್ರದೇಶಕ್ಕೆ ಕೊರೊನಾ ಸೋಂಕು ತಗುಲಿದರೆ, ಕಾಡ್ಗಿಚ್ಚಿನಂತೆ ಹರಡುತ್ತದೆ. ಸಾವಿರಾರು ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಪಾರ ಸಾವು ನೋವುಗಳಿಗೆ ಇದು ಕಾರಣವಾಗಬಹುದು. ಆದ್ದರಿಂದ ಈ ವೈರಸ್ ನ ಮಾರಕತೆಯನ್ನು ಅರಿತುಕೊಂಡು, ಕಟ್ಟುನಿಟ್ಟಿನ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ನಿಮ್ಮಲ್ಲಿ ವಿನಂತಿಸುತ್ತೇನೆ ಎಂದು ಅವರು ಬರೆದಿದ್ದಾರೆ.
ಕೊರೋನಾ ವಿಷಯವನ್ನು ಹಗುರವಾಗಿ ಪರಿಗಣಿಸಬೇಡಿ. ಒಂದು ಬಾರಿ ಕೊರೊನಾ ಸೋಂಕು ಹರಡಿದರೆ ಅನಂತರ ನಡೆಯುವ ಹಾನಿಗಳಿಗೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದ್ದರಿಂದ ಕೊರೊನಾ ತಡೆಗಟ್ಟುವಲ್ಲಿ ಕಟ್ಟುನಿಟ್ಟಿನ ಕೈಗೊಳ್ಳಿ ಎಂದು ವೈದ್ಯರು ಮಮತಾ ಅವರಿಗೆ ಸೂಚಿಸಿದ್ದಾರೆ.
ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಮಾಡುತ್ತಿರುವಂತೆ ಕಟ್ಟುನಿಟ್ಟಾಗಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಮತ್ತು ಈ ಅಪಾಯಕಾರಿ ವೈರಸ್ ಹರಡುವುದನ್ನು ತಡೆಯಲು ಕಠಿಣ ಕ್ರಮ ಅತ್ಯಗತ್ಯ ಎಂದು ಹೃದ್ರೋಗ ತಜ್ಞರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಕೊರೋನಾವನ್ನು ಕಿಲ್ಲಿಂಗ್ ಮೆಶಿನ್ ಎಂದು ಕರೆದಿರುವ ವೈದ್ಯರು ಸೂಕ್ತವಾದ ಕಠಿಣ ನಿಯಮಗಳನ್ನು ಪಾಲಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಶೀಘ್ರವಾಗಿ ಪರೀಕ್ಷೆ ನಡೆಸುವ ಕ್ರಮಗಳನ್ನು ಕೈಗೊಳ್ಳಲು ಮಮತಾ ಬ್ಯಾನರ್ಜಿಯವರಿಗೆ ಸಲಹೆ ನೀಡಿದರು. ಭಾರತ ಮತ್ತು ಅಮೆರಿಕದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ವೃತ್ತಿಯನ್ನು ಕೂಡಾ ನಿರ್ವಹಿಸಿರುವ ಡಾ.ಇಂದ್ರಾನಿಲ್ ಬಸು ರೇ ಕಟ್ಟುನಿಟ್ಟಿನ ಕ್ರಮ ಅನುಸರಿಸದೇ ಹೋದರೆ ಸಾವುಗಳು ಖಚಿತ. ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಸಾವನ್ನು ನೀವು ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದೂ ಪತ್ರದಲ್ಲಿ ಬರೆದಿದ್ದಾರೆ.