ತಪ್ಪು ಜಾಹಿರಾತು ನೀಡಿ ಗ್ರಾಹಕರನ್ನು ಮೋಡಿ ಮಾಡಿ ವಂಚಿಸುವ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಇನ್ನು ಮುಂದೆ ದಂಡ ವಿಧಿಸಲಿದೆ.
ಔಷಧ ಮತ್ತು ಮಾಂತ್ರಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ 1954ಕ್ಕೆ ಕೆಲವೊಂದು ತಿದ್ದುಪಡಿ ತರಲು ಚಿಂತಿಸಲಾಗಿದ್ದು, ಇದಕ್ಕೆ ಸಂಬಂಧಿಸಿ ಸರ್ಕಾರ ಈಗಾಗಲೇ ಕರಡು ಮಸೂದೆ ಪ್ರತಿಯನ್ನೂ ಸಿದ್ಧಪಡಿಸಿದೆ.
ಸರ್ಕಾರ ಸಿದ್ಧಪಡಿಸಿರುವ ಕರಡು ಮಸೂದೆ ಪ್ರಕಾರ, ಇನ್ನು ಮುಂದೆ ಈ ಕ್ರೀಮ್ ಹಚ್ಚಿದರೆ ನೀವು ಅಪ್ಸರೆಯಂತೆ ಕಾಣಿಸುತ್ತಿರಿ, ಈ ಶಾಂಪುವಿನಿಂದ ನಿಮ್ಮ ಕೂದಲು ರೇಷ್ಮೆಯಂತೆ ಕಂಗೊಳಿಸುತ್ತದೆ, ಈ ಪೌಡರ್ ಕುಡಿದರೆ ನೀವು ಎತ್ತರ ಆಗುತ್ತೀರಿ, ವಿವಿಧ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಎನ್ನುವ ಕಪಟ ಸೌಂದರ್ಯ ವರ್ಧಕ ಸಾಧನಗಳ ಜಾಹೀರಾತುಗಳು ನೀಡಿ ಗ್ರಾಹಕರನ್ನು ವಂಚಿಸುವ ಕಂಪೆನಿಗಳಿಗೆ 50 ಲಕ್ಷ ರೂ.ವರೆಗೆ ದಂಡ ಮತ್ತು ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಚರ್ಮದ ಕಾಂತಿ, ಕಿವುಡುತನ, ಎತ್ತರದ ಸುಧಾರಣೆ,
ಆಕಾಲಿಕ ಮುಪ್ಪು, ಬಾಲನೆರೆ, ಸ್ಥೂಲಕಾಯ, ಬಂಜೆತನ ನಿವಾರಣೆ ಸೇರಿದಂತೆ ವಿವಿಧ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಎನ್ನುವ ಔಷಧೀಯ ಉತ್ಪನ್ನಗಳ ಬಳಕೆಗಾಗಿ ನೀಡುವ ಜಾಹೀರಾತು ‘ಔಷಧ ಪರಿಹಾರ’ವೆಂದು ಪರಿಗಣಿಸಿದರೆ, ಯಂತ್ರ, ತಂತ್ರ, ಮಂತ್ರಶಕ್ತಿ, ಕವಚ, ತಾಯತ ಮುಂತಾದ ಪವಾಡ ಶಕ್ತಿಗಳ ಮೂಲಕ ಮನುಷ್ಯರು ಅಥವಾ ಪ್ರಾಣಿಗಳ ಯಾವುದೇ ರೀತಿಯ ಕಾಯಿಲೆಗಳನ್ನು ಪತ್ತೆಹಚ್ಚುವ, ಗುಣಪಡಿಸುವ, ತಗ್ಗಿಸುವ, ಚಿಕಿತ್ಸೆ ನೀಡುವ ಅಥವಾ ತಡೆಯುವ ಮುಂತಾಗಿ ಹೇಳುವಂತಹ ಜಾಹೀರಾತುಗಳನ್ನು ‘ಮಾಂತ್ರಿಕ ಪರಿಹಾರ’ ಎಂದು ಪರಿಗಣಿಸಲಾಗುತ್ತದೆ.
ಸುಮಾರು 78 ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದ್ದು, ಯಾವುದೇ ಕಂಪೆನಿಯು ಇವುಗಳ ನಿವಾರಣೆಯ ಬಗ್ಗೆ ಸುಳ್ಳು ಜಾಹಿರಾತು ನೀಡಿದರೆ, ಅವು ಹೊಸ ಕಾನೂನು ವ್ಯಾಪ್ತಿಗೆ ಒಳಪಡಲಿದೆ.








