ಚಾಮರಾಜನಗರ : ಕಬಿನಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಹಿನ್ನೆಲೆ ಕಾವೇರಿ ನದಿ ಪಾತ್ರದ ಜಮೀನುಗಳು ಮುಳುಗಡೆಯಾಗಿವೆ. ಇದರಿಂದ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಭೀತಿ ಆವರಿಸಿದೆ. ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ, ಹರಳೆ, ದಾಸಪುರ, ಹಳೆ ಅಣಗಳ್ಳಿ ಗ್ರಾಮಗಳ ರೈತರು ಬೆಳೆದಿದ್ದ ಭತ್ತ, ಮುಸುಕಿನ ಜೋಳ ಸಂಪೂರ್ಣವಾಗಿ ನಾಶವಾಗಿವೆ.
ಕಟಾವಿಗೆ ಬಂದಿದ್ದ ಮೆಕ್ಕೆ ಜೋಳದ ಜಮೀನುಗಳು ಜಲಮಯ ಆಗಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದರ ಮಧ್ಯೆ ಇಂದು ಜಲಾಶಯದಿಂದ ಮತ್ತಷ್ಟು ನೀರು ಬಿಡುಗಡೆ ಆಗುವ ಸೂಚನೆಗಳಿದ್ದು, ಇನ್ನಷ್ಟು ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ.
ಇನ್ನು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ನೀರು ಹರಿಸಿರುವುದರಿಂದ ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಪ್ರತಿ ಬಾರಿ ಇದು ಮರುಕಳಿಸುತ್ತಿದ್ದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.








