ಚಾಮರಾನಗರ: ಕೇರಳದಲ್ಲಿ ಭಾರೀ ಗುಡ್ಡ ಕುಸಿತದಿಂದಾಗಿ ಸಾವಿನ ಸಂಖ್ಯೆ 123ಕ್ಕೆ ಏರಿದೆ. ಈ ಪೈಕಿ ಚಾಮರಾಜನಗರ ಜಿಲ್ಲೆಯ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೆಪ್ಪಾಡಿಯಲ್ಲಿ ವಾಸಿಸುತ್ತಿದ್ದ ಚಾಮರಾಜನಗರ ಮೂಲದ ಪುಟ್ಟ ಸಿದ್ದಿ(62) ಹಾಗೂ ರಾಣಿ ಎಂಬುವರ ತಾಯಿ ಸಾವನ್ನಪ್ಪಿದ್ದಾರೆ. ಚಾಮರಾಜನಗರ ತಾಲೂಕಿನ ಇರಸವಾಡಿ ಮೂಲದ ರಾಜನ್ ಹಾಗೂ ರಜನಿ ನಾಪತ್ತೆಯಾಗಿದ್ದಾರೆ. ಮೂವತ್ತು ವರ್ಷಗಳಿಂದ ಕೇರಳದ ಚೂರಲ್ಲಾದಲ್ಲಿ ವಾಸವಿದ್ದರು. ಈಗ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದು, ರಾಜನ್, ರಜನಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಚಾಮರಾಜನಗರ ಜಿಲ್ಲಾಡಳಿತ ತಿಳಿಸಿದೆ.
ಮುಂಡಕೈನ ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರದ ಗುಂಡ್ಲುಪೇಟೆಯ ಝಾನ್ಸಿರಾಣಿ, ಎರಡೂವರೆ ವರ್ಷದ ಪುತ್ರ ನಿಹಾಲ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ ಭೂಕುಸಿತ ಸ್ಥಳದಲ್ಲಿ ಸುಮಾರು 98ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸಾವನ್ನಪ್ಪಿದವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ, 128 ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರೆಲ್ಲ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.








