ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಟ್ವಿಟ್ಟರ್ ನಲ್ಲಿ #ಲೆಕ್ಕಕೊಡಿ ಎಂಬ ವಿಡಿಯೋ ಅಭಿಯಾನ ಆರಂಭಿಸಿದ್ದು, ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ನಾವು ಪೈಸೆ-ಪೈಸೆ ಲೆಕ್ಕ ಕೊಡ್ತೀವಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬರೇ ಅಲ್ಲ ರಾಜ್ಯದಲ್ಲಿ ಯಾರೇ ಲೆಕ್ಕ ಕೇಳಿದ್ರು ನಾವು ಕೊಡ್ತೀವಿ. ನಮ್ಮ ಸರ್ಕಾರದ ಎಲ್ಲ ಲೆಕ್ಕ ಕೊಡ್ತೀವಿ. ಅವರ ಸರ್ಕಾರದಲ್ಲಿ ಅವರು ಏನಾದ್ರೂ ಲೆಕ್ಕ ಕೊಟ್ಟಿಲ್ಲದಿದ್ರೆ, ಅದೇ ಗುಂಗಲ್ಲಿ ನಮಗೂ ಕೇಳ್ತಿದ್ದಾರೆ. ನಾವಂತೂ ಪೈಸೆ-ಪೈಸೆ ಲೆಕ್ಕ ಕೊಡ್ತೀವಿ ಎಂದರು.
ಇನ್ನು ಇದೇ ವೇಳೆ ಶನಿವಾರ ಲಾಕ್ ಡೌನ್ ವಿಚಾರವಾಗಿ ಮಾತನಾಡಿದ ಅಶೋಕ್, ನಮ್ಮ ವಲಯದಲ್ಲಿ ಲಾಕ್ ಡೌನ್ ಬಗ್ಗೆ ಅಧಿಕಾರಿಗಳು ತಿಳಿಸಿಲ್ಲ. ಲಾಕ್ ಡೌನ್ ಬಗ್ಗೆ ಸಿಎಂ ಯೋಚನೆ ಕೂಡ ಮಾಡಿಲ್ಲ. ಸದ್ಯಕ್ಕೆ ಶನಿವಾರ ಲಾಕ್ ಡೌನ್ ಮಾಡುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ವಲಯವಾರು ಕುರಿತು ಪ್ರತಿದಿನ ನಾವು ದೂರವಾಣಿ ಮೂಲಕ ಸಿಎಂಗೆ ಮಾಹಿತಿ ಕೊಡುತ್ತೇವೆ. ನಮ್ಮ ಸಿಎಂ ಯಡಿಯೂರಪ್ಪ ತುಂಬಾ ಫಾಸ್ಟೂ. ನಾವು ಮಾಹಿತಿ ಕೊಟ್ಟಿಲ್ಲ ಅಂದರೆ ಅವರೇ ಕೇಳ್ತಾರೆ ಏನಾಯ್ತಪ್ಪ ಅಂತಾ. ನಾವು ನಿತ್ಯ ಮೀಟಿಂಗ್ ಬಗ್ಗೆ ಸಿಎಂಗೆ ತಿಳಿಸುತ್ತೇವೆ. ಸಿಎಂ ಸದ್ಯ ಕ್ವಾರಂಟೇನ್ ನಲ್ಲಿ ಇದ್ದಾರೆ. ಅವರಿಗೆ ನಾವು ಪ್ರತಿನಿತ್ಯ ಮಾಹಿತಿ ಒದಗಿಸುತ್ತೇವೆ ಎಂದು ತಿಳಿಸಿದರು.