ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದ ಯತ್ನಾಳ್ ವಿರುದ್ಧ ಕಾಂಗ್ರೆಸ್ ತಿರುಗಿ ಬಿದ್ದಿದೆ. ಸದನದಲ್ಲಿ ಯತ್ನಾಳ್ ವಿಚಾರವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಟ್ವಿಟ್ಟರ್ ನಲ್ಲೂ ಕೆಂಡಕಾರಿದ್ದಾರೆ. “ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದವರು ಒಬ್ಬ ಹಿರಿಯ ಸ್ವಾತಂತ್ರ‍್ಯ ಹೋರಾಟಗಾರನನ್ನು ಅವಮಾನಿಸಿರುವುದು ಸಂವಿಧಾನಕ್ಕೆ ಮಾಡಿರುವ ಅವಮಾನ. ಇಂತಹ ದೇಶದ್ರೋಹಿಗಳ ಜೊತೆ ಕಲಾಪದಲ್ಲಿ ಕುಳಿತುಕೊಳ್ಳಲು ನಾವು ಸಿದ್ಧರಿಲ್ಲ. ಅವರನ್ನು ಸಭಾಧ್ಯಕ್ಷರು ತಕ್ಷಣ ಅಮಾನತು ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇನ್ನು ಬಿಜೆಪಿ ನಾಯಕರು, ಮಂತ್ರಿಗಳು ಯತ್ನಾಳ್ ಹೇಳಿಕೆಯನ್ನು ಖಂಡಿಸುವ ಬದಲು ಬೆಂಬಲಿಸಿ ಮಾತನಾಡುತ್ತಾರೆ. ಪಕ್ಷದ ಶಾಸಕನೊಬ್ಬ ದೇಶದ ಸ್ವಾತಂತ್ರ‍್ಯ ಚಳುವಳಿಗೆ, ಸ್ವಾತಂತ್ರ‍್ಯ ಹೋರಾಟಗಾರರಿಗೆ ಅವಮಾನಿಸುವುದು ವೈಯಕ್ತಿಕ ಅಭಿಪ್ರಾಯ ಹೇಗಾಗುತ್ತದೆ. ಹಾಗಾದರೆ ಯತ್ನಾಳ್ ಹೇಳಿಕೆಗೆ ಬಿಜೆಪಿ ಸಮ್ಮತಿ ಇದೆಯೇ ಎಂಬುದನ್ನು ಅಧಿಕೃತವಾಗಿ ಸ್ಪಷ್ಟಪಡಿಸಲಿ. ಸ್ವಾತಂತ್ರ‍್ಯ ಹೋರಾಟಗಾರ ದೊರೆಸ್ವಾಮಿಯವರನ್ನು ಒಂದು ಪಕ್ಷಕ್ಕೆ ಕಟ್ಟಿಹಾಕುವುದು ಸರಿಯಲ್ಲ. ಅವರು ಹಿಂದೆಯೂ ತುರ್ತುಪರಿಸ್ಥಿತಿ ಕಾಲದಲ್ಲಿ ಇಂದಿರಾ ಗಾಂಧಿ ವಿರುದ್ಧವೂ ಪ್ರತಿಭಟಿಸಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರದ ವಿರುದ್ಧವೂ ಪ್ರತಿಭಟನೆ ನಡೆಸಿದ್ದರು ಎಂದು ತಿಳಿಸಿದ್ದಾರೆ.
ಇದೇ ವೇಳೆ ಸ್ಪೀಕರ್ ನಡೆಯನ್ನು ಖಂಡಿಸಿರುವ ಸಿದ್ದರಾಮಯ್ಯ, ಸದನಕ್ಕೆ ಅಗೌರವ ತೋರುವ ಸದಸ್ಯರನ್ನು ಅಮಾನತು ಮಾಡಬೇಕೆಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿತ್ತು. ಆ ತೀರ್ಪನ್ನು ಆಧಾರವಾಗಿಟ್ಟುಕೊಂಡು ಯತ್ನಾಳ್ ಅವರನ್ನು ಅಮಾನತು ಮಾಡುವಂತೆ ಸಭಾಧ್ಯಕ್ಷರಲ್ಲಿ ಒತ್ತಾಯ ಮಾಡಿದ್ದೇವೆ. ಆದರೆ ನಮಗೆ ಮಾತನಾಡಲು ಅವಕಾಶವನ್ನೇ ನೀಡದಿರುವ ಸಭಾಧ್ಯಕ್ಷರ ವರ್ತನೆ ಸರಿ ಅಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.









