ಬೆಂಗಳೂರು : ನಾವು ಮನುಷ್ಯರ ಪರ, ಮನುಷ್ಯವಿರೋಧಿಗಳ ಪರ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಉತ್ತರಿಸಿ, ಮರು ಪ್ರಶ್ನೆ ಹಾಕಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ ಬಗ್ಗೆ ಕೊಪ್ಪಳದಲ್ಲಿ ಮಾತನಾಡಿದ್ದ ಕಟೀಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ದಲಿತರ ಪರವೋ ಅಥವಾ ಭಯೋತ್ಪಾದಕರ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದರು. ಇದಕ್ಕೆ ಟ್ವಿಟ್ಟರ್ ನಲ್ಲಿ ಕಟೀಲ್ ಗೆ ಸಿದ್ದರಾಮಯ್ಯ ಗುಮ್ಮಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ ನಲ್ಲಿ, “ನಳಿನ್ ಕುಮಾರ್ ಕಟೀಲ್ ಅವರೇ, ನಾವು ಮನುಷ್ಯರ ಪರ, ಮನುಷ್ಯವಿರೋಧಿಗಳ ಪರ ಅಲ್ಲ. ನಾವು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರ ಅಲ್ಲ. ನಾವು ಕಟ್ಟುವವರ ಪರ, ಕೆಡವುವವರ ಪರ ಅಲ್ಲ”.
“ನಳಿನ್ ಕುಮಾರ್ ಕಟೀಲ್ ಅವರೇ, ನೀವು ದಲಿತರ ಪರವೋ? ಹಿಂದೂಗಳ ಪರವೋ? ನೀವೊಬ್ಬ ಹಿಂದೂವಾದರೆ, ಅಖಂಡ ಶ್ರೀನಿವಾಸಮೂರ್ತಿ ಯಾಕೆ ಹಿಂದೂ ಅಲ್ಲ? ಅವರ್ಯಾಕೆ ಹಿಂದೂ ಆಗದೆ ಕೇವಲ ದಲಿತ ಆಗಿಬಿಟ್ಟರು..? ಹಿಂದುತ್ವದ ಸರಿಯಾದ ವ್ಯಾಖ್ಯಾನ ಏನೆಂದು ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡು ಸ್ಪಷ್ಟಪಡಿಸುವಿರಾ ಎಂದು ಪ್ರಶ್ನಿಸಿದ್ದಾರೆ.








