ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ಸರ್ಕಾರ ಒಂದು ವರ್ಷ ಪೂರೈಸಿದ್ದು, ನಮೆಗೆಲ್ಲ ಹೆಮ್ಮೆ ಆಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಉತ್ತಮ ಸರ್ಕಾರವನ್ನು ಕೊಟ್ಟಿದ್ದೇವೆ. ಅಧಿಕಾರ ವಹಿಸಿಕೊಂಡಾಗ ಅನಾವೃಷ್ಟಿ ಇತ್ತು. ಕೆಲ ದಿನಗಳಲ್ಲಿ ಅತಿವೃಷ್ಟಿ ಬಂತು ಬಳಿಕ ಉಪಚುನಾವಣೆಗಳು ಬಂದವು ನಂತರ ಕೊರೊನಾ ಬಂತು. ಇಂತಹ ಸಂಕಷ್ಟದ ಕಾಲದಲ್ಲೂ ಉತ್ತಮ ಕಾರ್ಯ ಮಾಡಿದ್ದೇವೆ. ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದೇವೆ ಎಂದು ಸರ್ಕಾರದ ಕಾರ್ಯಗಳನ್ನು ಸಮರ್ಥಿಸಿಕೊಂಡರು.
ಇದೇ ವೇಳೆ ಕಳೆದ ವರ್ಷದ ನೆರೆ ಬಗ್ಗೆ ಮಾತನಾಡಿ ಡಿಸಿಎಂ, ಯಡಿಯೂರಪ್ಪ ಅವರು ಜನ ನಾಯಕರಾಗಿ, ರೈತ ನಾಯಕರಾಗಿ ಜನರ ನಡುವೆ ಇದ್ದು ಕೆಲಸ ಮಾಡುತ್ತಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳ ಜನರಿಗೆ ನೆರವು ನೀಡಲಾಗಿದ್ದು, 6 ಸಾವಿರ ಕೋಟಿ ರೂ. ಪರಿಹಾರ ನೀಡಲಾಗಿದೆ. ತಲಾ 10 ಸಾವಿರ ಪರಿಹಾರ ಪ್ರತಿ ಕುಟುಂಬಕ್ಕೆ ಕೊಟ್ಟಿದ್ದೇವೆ. ಪ್ರವಾಹದಿಂದ ಕುಸಿದ ಮನೆಗಳ ಪುನರ್ ನಿರ್ಮಾಣಕ್ಕೆ ತಲಾ 5 ಲಕ್ಷ ಕೊಡಲಾಯ್ತು. ಬೆಳೆ ನಾಶ ಆದವರಿಗೆ 1,180 ಕೋಟಿ ಪರಿಹಾರ ನೀಡಲಾಗಿದೆ. ಕೇಂದ್ರದ 1,800 ಕೋಟಿ ರೂ. ಸೇರಿ ಪ್ರವಾಹ ಎದುರಿಸಲು 6,000 ಕೋಟಿ ರೂ. ಬಳಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.








