ಬೆಂಗಳೂರು: ರಾಜ್ಯದಲ್ಲಿ ಐಪಿಎಲ್ ಕ್ರಿಕೆಟ್ ಜ್ವರ ತಾರಕಕ್ಕೇರಿದ್ದು, ಈ ಬಿಸಿಯು ಈಗ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧಕ್ಕೂ ವ್ಯಾಪಿಸಿದೆ. ಅಭಿಮಾನಿಗಳು ಟಿಕೆಟ್‌ಗಾಗಿ ಕ್ರೀಡಾಂಗಣದ ಹೊರಗೆ ಮತ್ತು ಆನ್‌ಲೈನ್‌ನಲ್ಲಿ ಹಗಲಿರುಳು ಪರದಾಡುತ್ತಿದ್ದರೆ, ಇತ್ತ ಜನಪ್ರತಿನಿಧಿಗಳಾದ ಶಾಸಕರು ತಮಗೂ ವಿಐಪಿ ಮರ್ಯಾದೆ ಬೇಕು, ಉಚಿತ ಟಿಕೆಟ್ ಬೇಕು ಎಂದು ಪಟ್ಟು ಹಿಡಿದ ಪ್ರಸಂಗ ಸದನದಲ್ಲಿ ನಡೆದಿದೆ.
ನಾವು ಕ್ಯೂನಲ್ಲಿ ನಿಲ್ಲಲು ಸಾಧ್ಯವೇ?
ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಸದನದಲ್ಲಿ ಶೂನ್ಯ ವೇಳೆಯ ವಿಷಯ ಪ್ರಸ್ತಾಪಿಸಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಆರ್‌ಸಿಬಿ ಪಂದ್ಯಗಳಿಗೆ ಶಾಸಕರಿಗೆ ನೀಡುತ್ತಿರುವ ಟಿಕೆಟ್ ವ್ಯವಸ್ಥೆ ಸರಿಯಿಲ್ಲ. ನಮಗೆ ಕೇವಲ ಒಂದೇ ಒಂದು ಪಾಸ್ ನೀಡಿದರೆ ಹೇಗೆ? ನಮ್ಮ ಕುಟುಂಬಸ್ಥರನ್ನು, ಮಕ್ಕಳನ್ನು ಬಿಟ್ಟು ನಾವು ಒಬ್ಬರೇ ಪಂದ್ಯ ನೋಡಲು ಹೋಗಬೇಕೇ? ನಾವು ಜನಪ್ರತಿನಿಧಿಗಳು, ಸಾಮಾನ್ಯರಂತೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಸಾಧ್ಯವಿಲ್ಲ. ನಮಗೆ ನಮ್ಮದೇ ಆದ ಘನತೆ ಇದೆ” ಎಂದು ಆಕ್ರೋಶ ಹೊರಹಾಕಿದರು.
ಅಲ್ಲದೆ, “ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟದ ಹೆಸರಿನಲ್ಲಿ ಬ್ಲ್ಯಾಕ್ ಮಾರ್ಕೆಟ್ ದಂಧೆ ಜೋರಾಗಿದೆ. ಕೂಡಲೇ ಸರ್ಕಾರ ಇದರಲ್ಲಿ ಮಧ್ಯಪ್ರವೇಶಿಸಬೇಕು. ಪ್ರತಿಯೊಬ್ಬ ಶಾಸಕರಿಗೆ ಕನಿಷ್ಠ ಐದು ಟಿಕೆಟ್‌ಗಳನ್ನು ನೀಡಬೇಕು ಮತ್ತು ಕ್ರೀಡಾಂಗಣದಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು” ಎಂದು ಸ್ಪೀಕರ್ ಯು.ಟಿ. ಖಾದರ್ ಅವರಲ್ಲಿ ಮನವಿ ಮಾಡಿದರು.
ಕೆಎಸ್‌ಸಿಎ ಸುಲಿಗೆ ಮಾಡುತ್ತಿದೆ: ಆರ್. ಅಶೋಕ್ ಕಿಡಿ
ಇದೇ ವಿಚಾರವಾಗಿ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕ್ರಿಕೆಟ್ ಮಂಡಳಿಯ ವಿರುದ್ಧ ವಾಗ್ದಾಳಿ ನಡೆಸಿದರು. “ಕೆಎಸ್‌ಸಿಎ ಬಳಿ ಈಗಾಗಲೇ ಕೋಟ್ಯಂತರ ರೂಪಾಯಿ ಹಣವಿದೆ. ಆದರೂ ಪಂದ್ಯದ ಟಿಕೆಟ್‌ಗಳ ಹೆಸರಿನಲ್ಲಿ ಜನರಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಲೂಟಿ ಮಾಡುವ ಇವರಿಗೆ ಸರ್ಕಾರ ಮತ್ತೊಂದು ಕ್ರೀಡಾಂಗಣ ನಿರ್ಮಿಸಲು ಜಾಗ ನೀಡುವ ಆಲೋಚನೆ ಮಾಡುತ್ತಿದೆ. ಇಂತಹವರಿಗೆ ಮೊದಲು ತಕ್ಕ ಪಾಠ ಕಲಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಸ್ಪೀಕರ್ ಖಾದರ್ ಸೂಚನೆ
ಶಾಸಕರ ಅಳಲನ್ನು ಆಲಿಸಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಶಾಸಕರ ಬೇಡಿಕೆಗೆ ಬೆಂಬಲ ಸೂಚಿಸಿದರು. “ಶಾಸಕರಿಗೆ ಕ್ರೀಡಾಂಗಣದಲ್ಲಿ ಗೌರವ ಸಿಗುತ್ತಿಲ್ಲ ಎಂಬ ಆರೋಪಗಳು ಗಂಭೀರವಾದವು. ಈ ಬಗ್ಗೆ ಸರ್ಕಾರ ಕೆಎಸ್‌ಸಿಎ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಬೇಕು. ಮುಂದಿನ ಪಂದ್ಯಗಳಲ್ಲಿ ಶಾಸಕರಿಗೆ ತಲಾ 4 ಟಿಕೆಟ್‌ಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದರು.
ಕೊನೆಯಲ್ಲಿ, “ನನ್ನ ಹತ್ತಿರ ಯಾರೂ ಟಿಕೆಟ್‌ಗಾಗಿ ಬರಬೇಡಿ, ಈ ವಿಷಯದಲ್ಲಿ ಏನಿದ್ದರೂ ನೀವು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನೇ ಕೇಳಬೇಕು” ಎಂದು ಚರ್ಚೆಗೆ ವಿರಾಮ ಹಾಕಿದರು. ಒಟ್ಟಿನಲ್ಲಿ, ಮೈದಾನದಲ್ಲಿ ಆಟಗಾರರ ಕಾದಾಟಕ್ಕೂ ಮುನ್ನವೇ, ಟಿಕೆಟ್‌ಗಾಗಿ ವಿಧಾನಸೌಧದಲ್ಲಿ ಶಾಸಕರ ಕಾದಾಟ ಜೋರಾಗಿಯೇ ನಡೆದಿದೆ.






