ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆಯನ್ನು ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ವಿರೋಧ ಪಕ್ಷವೇ ಇಲ್ಲದಂತಾಗಿದೆ, ಅದು ಸತ್ತು ಹೋಗಿದೆ ಎಂದು ಹೇಳುವ ಮೂಲಕ ಸ್ವಪಕ್ಷ ಬಿಜೆಪಿಯ ಸದ್ಯದ ಸ್ಥಿತಿಗತಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೆವು
ರಾಜ್ಯದಲ್ಲಿ ಬಿಜೆಪಿಗೆ ಎಂದಿಗೂ ಪೂರ್ಣ ಬಹುಮತ ಬಂದಿಲ್ಲ ಎಂಬ ಕಟು ಸತ್ಯವನ್ನು ಒಪ್ಪಿಕೊಂಡ ಈಶ್ವರಪ್ಪ, ನಾವು ಈ ಹಿಂದೆ ಅಧಿಕಾರಕ್ಕೆ ಬಂದಿದ್ದು ದಾರಿ ತಪ್ಪಿ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪಕ್ಷದ ಆಂತರಿಕ ಸ್ಥಿತಿಗತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಬಿಜೆಪಿಯಲ್ಲಿ ಒಂದಷ್ಟು ಶುದ್ಧೀಕರಣವಾಗಬೇಕಿದೆ. ಲಕ್ಷಾಂತರ ಮಂದಿ ನಿಷ್ಠಾವಂತ ಕಾರ್ಯಕರ್ತರು ಇಂದು ನೋವು ಅನುಭವಿಸುತ್ತಾ ಪಕ್ಷದಲ್ಲಿ ದಿನ ದೂಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುವ ನಿರೀಕ್ಷೆಯಲ್ಲಿದ್ದು, ಪಕ್ಷ ಶುದ್ಧೀಕರಣಗೊಂಡ ನಂತರ ಒಂದಷ್ಟು ಷರತ್ತುಗಳನ್ನು ಮುಂದಿಟ್ಟು ಪಕ್ಷದ ಕಾರ್ಯದಲ್ಲಿ ಸಕ್ರಿಯನಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ಟಿಕೆಟ್ ತಪ್ಪಿದ್ದಕ್ಕಲ್ಲ, ಶುದ್ಧೀಕರಣಕ್ಕಾಗಿ ಹೋರಾಟ
ನನ್ನ ಮಗನಿಗೆ ಟಿಕೆಟ್ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ನಾನು ಪಕ್ಷದಿಂದ ದೂರ ಉಳಿದಿಲ್ಲ. ಅದರ ಹಿಂದೆ ಬೇರೆ ಹಲವು ಗಂಭೀರ ಕಾರಣಗಳಿವೆ. ಮುಖ್ಯವಾಗಿ ಪಕ್ಷದಲ್ಲಿ ಕಸ ಗುಡಿಸುವ ಕೆಲಸವಾಗಬೇಕಿದೆ, ಅದು ನನ್ನ ಹೆಬ್ಬಯಕೆ. ಆ ಕಾರಣಗಳೇನು ಎಂಬುದು ಪಕ್ಷದ ವರಿಷ್ಠರಿಗೆ ಚೆನ್ನಾಗಿ ತಿಳಿದಿದೆ ಎಂದು ಮಾರ್ಮಿಕವಾಗಿ ನುಡಿದರು. ನಾನು ಹೋರಾಟದ ಮೂಲಕವೇ ಬದುಕು ಕಟ್ಟಿಕೊಂಡವನು, ನನ್ನಲ್ಲಿ ಯಾವುದೇ ರಾಜಕೀಯ ವೈರಾಗ್ಯವಿಲ್ಲ. ಸದ್ಯಕ್ಕೆ ಹಿಂದುತ್ವ ಮತ್ತು ಧರ್ಮದ ಜಾಗೃತಿಗಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಹೈಕಮಾಂಡ್ ಅಸ್ತಿತ್ವದಲ್ಲಿದೆಯೇ?
ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ರಾಜ್ಯ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮಿತಿ ಮೀರಿದೆ. ಇಲ್ಲಿ ಹೈಕಮಾಂಡ್ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಬಣಗಳ ನಡುವೆ ಅಧಿಕಾರಕ್ಕಾಗಿ ಶೀತಲ ಸಮರ ನಡೆಯುತ್ತಿದೆ. 125 ವರ್ಷಗಳ ಇತಿಹಾಸವಿರುವ ಪಕ್ಷಕ್ಕೆ ಇಂತಹ ದುಸ್ಥಿತಿ ಬಂದಿರುವುದು ವಿಷಾದನೀಯ ಎಂದು ಲೇವಡಿ ಮಾಡಿದರು.
ಅಭಿವೃದ್ಧಿ ಶೂನ್ಯ, ಗೂಂಡಾಗಳ ದರ್ಬಾರ್
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಶಾಸಕರಿಗೆ ತಲಾ 50 ಕೋಟಿ ಅನುದಾನ ನೀಡುವ ಸಿಎಂ ಘೋಷಣೆ ಸುಳ್ಳಾಗಿದೆ. ಕಾಂಗ್ರೆಸ್ ಶಾಸಕರಲ್ಲಿನ ಅಧಿಕಾರ ದಾಹದಿಂದಾಗಿ ಅಭಿವೃದ್ಧಿಯ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಇನ್ನೊಂದೆಡೆ ಬಾಗಲಕೋಟೆಯಂತಹ ಕಡೆಗಳಲ್ಲಿ ಕಲ್ಲೆಸೆತ ಪ್ರಕರಣಗಳು ನಡೆಯುತ್ತಿವೆ. ಗೂಂಡಾಗಳು ಮತ್ತು ಸಮಾಜಘಾತುಕ ಶಕ್ತಿಗಳಿಗೆ ಸರ್ಕಾರದ ಭಯವಿಲ್ಲದಂತಾಗಿದೆ. ತಪ್ಪು ಮಾಡಿದರೂ ಜಾಮೀನಿನ ಮೇಲೆ ಹೊರಬರಬಹುದು ಎಂಬ ಧೈರ್ಯ ಅವರಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆ ಹಿಂದುತ್ವದ ಆಧಾರ
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮತ್ತು ದೇಶದ್ರೋಹಿ ಚಟುವಟಿಕೆಗಳು ಹೆಚ್ಚುತ್ತಿವೆ. ಹಿಂದೂಗಳ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ಚುನಾವಣೆಗಳು ಸಂಪೂರ್ಣವಾಗಿ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಆಧಾರದ ಮೇಲೆ ನಡೆಯಲಿದ್ದು, ಅಂತಿಮವಾಗಿ ಹಿಂದುತ್ವ ಉಳಿಸುವವರು ಮಾತ್ರ ಗೆಲುವು ಸಾಧಿಸುತ್ತಾರೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.








