ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನುಮತಿ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್‌ನವರ ಪದಗ್ರಹಣ ಕಾರ್ಯಕ್ರಮಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದ್ರೆ ಕೋವಿಡ್ ಇರುವುದರಿಂದ ಹೆಚ್ಚು ಜನರನ್ನು ಸೇರಬಾರದೆಂಬ ನಿರ್ಬಂಧವಿದೆ. ಜನರನ್ನು ಸೇರಿಸದೆ ಇತಿಮಿತಿಯಲ್ಲಿ ಕಾರ್ಯಕ್ರಮ ಮಾಡಿಕೊಳ್ಳಲಿ ಎಂದು ಸಿಎಂ ಹೇಳಿದ್ದಾರೆ.
ಇನ್ನು ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡದ ಹಿನ್ನೆಲೆ ಸರ್ಕಾರದ ವಿರುದ್ಧ ನಿನ್ನೆಯಷ್ಟೇ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿಎಂ ಯಡಿಯೂರಪ್ಪನವರು ನುಡಿದಂತೆ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಸೂಕ್ತ ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾರ್ಯಕ್ರಮ ನಡೆಸುವುದಾಗಿ ಡಿಕೆಶಿ ಈಗಾಗಲೇ ಭರವಸೆ ಕೊಟ್ಟಿದ್ದು, ಈ ಹಿಂದೆ ನಿಗದಿಪಡಿಸಿದಂತೆ ಜೂನ್ 14ರಂದೇ ಪದಗ್ರಹಣ ಸಮಾರಂಭ ನೆರವೇರುವುದು ಖಚಿತವಾಗಿದೆ.








