ಬೆಳಗಾವಿ : ಕಾಂಗ್ರೆಸ್ ನ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಶಾಸಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಗೊಂದಲ ಮಾಡುವುದು ರಮೇಶ್ ಜಾರಕಿಹೊಳಿ ಬಂಡವಾಳ. ಕಾಂಗ್ರೆಸ್ ಪಕ್ಷದಿಂದ ಯಾರೊಬ್ಬರೂ ಬಿಜೆಪಿಗೆ ಹೋಗುವುದಿಲ್ಲ. ಹೋದರೂ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧವಾಗಿದೆ. ಕಾಂಗ್ರೆಸ್ ನಿಂದ ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ. ಮಾಡುವ ಅವಶ್ಯಕತೆ ಕಾಂಗ್ರೆಸ್ ಗೆ ಇಲ್ಲ. ಬಿಜೆಪಿ ಶಾಸಕರನ್ನು ಸೆಳೆಯುವಷ್ಟು ದೊಡ್ಡ ಪ್ರಮಾಣದ ಬ್ಯಾಂಕ್ ಬ್ಯಾಲೆನ್ಸ್ ನಮ್ಮಲ್ಲಿ ಇಲ್ಲ ಎಂದರು.
ಇದೇ ವೇಳೆ ಮಧ್ಯಂತರ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಒಟ್ಟು ಮೂರು ಗುಂಪುಗಳಿವೆ. ಜನತಾ ಪರಿವಾರದಿಂದ ಬಂದವರ ಒಂದು ಗುಂಪು, ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರ ಒಂದು ಗುಂಪು ಹಾಗೂ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿರುವವರ ಒಂದು ಗುಂಪು, ಹೀಗೆ 3 ಗುಂಪುಗಳಿವೆ. ಹೀಗಾಗಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ ಎಂದರು.
ಇನ್ನು ಸಿದ್ದರಾಮಯ್ಯ ಭೇಟಿಗೆ ಉಮೇಶ್ ಕತ್ತಿ ಯತ್ನ ವಿಚಾರವಾಗಿ ಮಾತನಾಡಿದ ಜಾರಕಿಹೊಳಿ, ರಾಜಕೀಯಲ್ಲಿ ಯಾರು ಯಾರನ್ನು ಬೇಕಾದರೂ ಭೇಟಿ ಆಗಬಹುದು. ಉಮೇಶ್ ಕತ್ತಿಯವರ ಧೈರ್ಯದ ಮೇಲೆ ಬಂಡಾಯದ ತೀವ್ರತೆ ನಿರ್ಧಾರ ಆಗಲಿದೆ. ಇನ್ನು ಮಧ್ಯಂತರ ಚುನಾವಣೆ ಬಂಡಾಯದ ಕುಸ್ತಿಯ ಮೇಲೆ ನಿರ್ಧಾರವಾಗಲಿದ್ದು, ಇದೀಗ ಕುಸ್ತಿ ಆರಂಭವಾಗಿದೆ. ಕೇವಲ ಸೆಡ್ಡು ಹೊಡೆದು ಹೊರಗೆ ನಿಂತು ಬಾಳಿಕಾಯಿ ತಗೊಂಡು ವಾಪಸ್ ಬಂದ್ರೆ ಏನೂ ಪ್ರಯೋಜನವಿಲ್ಲ. ನಿಜವಾದ ಕುಸ್ತಿ ಆದ್ರೆ ಮಾತ್ರ ನಾಯಕತ್ವ ಬದಲಾವಣೆ, ಮಧ್ಯಂತರ ಚುನಾವಣೆ ಆಗಲಿದೆ ಎಂದು ಹೇಳಿದ್ದಾರೆ.








