ಈ ಸಲ ಕಪ್ ನಮ್ದೆ.. ಈ ಸಲ ಕಪ್ ನಮ್ದೆ..
ಕಳೆದ 17 ಐಪಿಎಲ್ ಟೂರ್ನಿಗಳಲ್ಲಿ ನಿರಾಸೆ ಅನುಭವಿಸಿದ್ರೂ RCB ಅಭಿಮಾನಿಗಳು ಆರ್ಸಿಬಿ ತಂಡದ ಮೇಲೆ ನಂಬಿಕೆ ಕಳೆದುಕೊಂಡಿರಲಿಲ್ಲ. ಕೊನೆಗೂ 18ನೇ ಐಪಿಎಲ್ನಲ್ಲಿ ಚಾಂಪಿಯನ್ಪಟ್ಟಕ್ಕೇರಿದಾಗ RCB ಅಭಿಮಾನಿಗಳ ಸಂತಸ, ಖುಷಿಗೆ ಪಾರವೇ ಇರಲಿಲ್ಲ.
ಆದ್ರೆ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಅಭಿಮಾನಿಗಳನ್ನು ಬಲಿಪಡೆದುಕೊಂಡಿರುವುದು RCBಗೆ ಮಾತ್ರವಲ್ಲ. ಬೆಂಗಳೂರು, ಚಿನ್ನಸ್ವಾಮಿ ಅಂಗಣಕ್ಕೂ ಕಪ್ಪುಚುಕ್ಕೆಯಾಗಿದೆ. ಪರಿಣಾಮ ಚಿನ್ನಸ್ವಾಮಿ ಮೈದಾನದಲ್ಲಿ ಈ ಬಾರಿ ಪಂದ್ಯಗಳು ನಡೆಯುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
ಈ ನಡುವೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳು ಸಿದ್ಧಗೊಳ್ಳುತ್ತಿವೆ. ಈಗಾಗಲೇ ತಂಡಗಳು ರೆಡಿಯಾಗಿದ್ದು, ಅಭ್ಯಾಸಕ್ಕೆ ತಯಾರಿ ಕೂಡ ನಡೆಸುತ್ತಿವೆ. ಅನುಭವಿಗಳ ಜೊತೆಗೆ ಯುವ ಆಟಗಾರರಿಗೂ ಅವಕಾಶಗಳನ್ನು ಎಲ್ಲಾ ಫ್ರಾಂಚೈಸಿಗಳು ನೀಡಿವೆ.
ಸಹಜವಾಗಿಯೇ ಈ ಬಾರಿಯೂRCB ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಹಾಲಿ ಚಾಂಪಿಯನ್ ಎಂಬ ಬೀಗಿನಿಂದಲೇ RCB ಕೂಡ ಕಣಕ್ಕಿಳಿಯಲಿದೆ. ಆದ್ರೆ ನಮ್ಮ ಕರುನಾಡಿನ RCB ಅಭಿಮಾನಿಗಳು ಈಗ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ.
ನಿಜ, RCB ಅಂದ್ರೆ ವಿರಾಟ್ ಕೊಹ್ಲಿ.. ವಿರಾಟ್ ಕೊಹ್ಲಿ ಅಂದ್ರೆ RCB..ಈ ಅಭಿಮಾನ.. ಪ್ರೀತಿ..ಇರಲಿ. ಇದು ತಪ್ಪು ಅಂತ ಹೇಳ್ತಿಲ್ಲ. ಇದಕ್ಕೆ ಅಪಸ್ವರವನ್ನು ವ್ಯಕ್ತಪಡಿಸೋದೂ ಇಲ್ಲ. ಇದು ಅವರವರ ಇಷ್ಟ.. ಅಭಿಮಾನಿಗಳ ಪ್ರೀತಿ, ಅಭಿಮಾನವನ್ನು ಪ್ರಶ್ನೆ ಕೂಡ ಮಾಡಲ್ಲ.
ಆದ್ರೆ ಪ್ರಶ್ನೆ ಅದಲ್ಲ. ನಾವು ಅಂದ್ರೆ ಕರ್ನಾಟಕದವರು, ಕನ್ನಡಿಗರು, ಬೆಂಗಳೂರಿನವರು ಯಾಕೆ ಆರ್ಸಿಬಿ ತಂಡವನ್ನು ಬೆಂಬಲಿಸಬೇಕು ಅನ್ನೋದು ಒಂದು ಪ್ರಶ್ನೆಯಾದ್ರೆ, ಕೇವಲ ವಿರಾಟ್ಗೋಸ್ಕರ ನಾವು RCBಗೆ ಜೈ ಅನ್ನಬೇಕಾ ಅನ್ನೋದು ಇನ್ನೊಂದು ಪ್ರಶ್ನೆ.
RCB ಮ್ಯಾನೇಜ್ಮೆಂಟ್ಗೆ ಕನ್ನಡಿಗರ ಪ್ರೀತಿ ಬೇಕು..ಕರ್ನಾಟಕದ ಬಲ ಬೇಕು.. ಕನ್ನಡದ ಅಭಿಮಾನಿಗಳು ಬೇಕು. ನಮ್ಮ ಬೆಂಗಳೂರಿನ ಹೆಸರು ಬೇಕು. RCB ಪಂದ್ಯಗಳನ್ನು ಕನ್ನಡಿಗರು ನೋಡಬೇಕು. RCB ತಂಡಕ್ಕೆ ಜೈಕಾರ ಹಾಕಬೇಕು. RCB ತಂಡಕ್ಕೆ ಸಪೋರ್ಟ್ ಮಾಡಬೇಕು. ಹೀಗೆ ಎಲ್ಲವೂ ಓಕೆ.. ಆದ್ರೆ ಕರ್ನಾಟಕದ ಆಟಗಾರರು ಮಾತ್ರ ಬೇಡ ಏಕೆ..? ಇದು ಎಷ್ಟರ ಮಟ್ಟಿಗೆ ಸರಿ..?
ಸದ್ಯ RCB ತಂಡದಲ್ಲಿರುವ ಏಕೈಕ ಆಟಗಾರ ಅಂದ್ರೆ ಅದು ದೇವದತ್ತ್ ಪಡಿಕ್ಕಲ್. ಆದ್ರೆ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ತಾರಾ ಅನ್ನೋದು ಕೂಡ ಅನುಮಾನದಲ್ಲಿದೆ. ಅದನ್ನು ಬಿಟ್ರೆ, ಮ್ಯಾನೇಜ್ಮೆಂಟ್, ಕೋಚಿಂಗ್ ಸ್ಟಾಫ್ನಲ್ಲೂ ಕನ್ನಡಿಗರೇ ಇಲ್ಲ. ಅದು ಬೇಡ. ಕನಿಷ್ಠ ಒಬ್ಬನೇ ಒಬ್ಬ ಯುವ ಆಟಗಾರನಿಗಾದ್ರೂ ಅವಕಾಶ ನೀಡಬಹುದಿತ್ತು. ಯಾಕಂದ್ರೆ, ಕರ್ನಾಟಕದ ಯಶ್ರಾಜ್ಪೂಂಜ ಮತ್ತು ಪ್ರವೀಣ್ ದುಬೆಯವರನ್ನು ಕ್ರಮವಾಗಿ ರಾಜಸ್ತಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ನವರು ಖರೀದಿ ಮಾಡಿದ್ದರು. ಆದ್ರೆ RCBಗೆ ಮಾತ್ರ ಈ ಆಟಗಾರರು ಕೂಡ ಬೇಡ. ಕನ್ನಡಿಗರು ಅಂದ್ರೆ ಇಷ್ಟೊಂದು ಅಸಡ್ಡೆ ಯಾಕೆ..? ಕಳೆದ 18 ವರ್ಷಗಳಿಂದ RCB, ಕರ್ನಾಟಕದ ಸ್ಥಳೀಯ ಪ್ರತಿಭೆಗಳಿಗೆ ಎಷ್ಟು ಅವಕಾಶ ನೀಡಿದೆ..? ಎಷ್ಟು ಮಂದಿ ಕರ್ನಾಟಕದ ಆಟಗಾರರನ್ನು ಬೆಳೆಸಿದೆ..?
ಬಹುಶಃ RCB ಮ್ಯಾನೇಜ್ಮೆಂಟ್ ವಿಜಯ್ ಮಲ್ಯ ಅವರ ಕೈತಪ್ಪಿದ್ದ ಬಳಿಕ ಕನ್ನಡಿಗರಿಗೆ ಅವಕಾಶವೇ ಇಲ್ಲ. ಐಪಿಎಲ್ನ ಆರಂಭದ ವರ್ಷಗಳಲ್ಲಿ ಕನ್ನಡಿಗರೇ ಹೆಚ್ಚು RCB ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ಯಾವಾಗ ವಿಜಯ್ ಮಲ್ಯ RCBಗೆ ಕೈಕೊಟ್ರೂ RCB ಮ್ಯಾನೇಜ್ಮೆಂಟ್ ಕರ್ನಾಟಕದ ಪ್ರತಿಭೆಗಳನ್ನು ಕಸದಿಂದ ಕಡೆ ಮಾಡುತ್ತಿದೆ ಎಂಬುದು ಸುಳ್ಳಲ್ಲ. ಯಾಕಂದ್ರೆ ಬೇರೆ ಬೇರೆ ಫ್ರಾಂಚೈಸಿಗಳು ಕರ್ನಾಟಕದ ಆಟಗಾರರ ಮೇಲೆ ಒಲವು ತೋರುತ್ತಿರುವಾಗ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಆಸಕ್ತಿ ಯಾಕಿಲ್ಲ ?
ಇನ್ನು, ಕಳೆದ ವರ್ಷ ಅಂದ್ರೆ 18 ವರ್ಷಗಳ ಬಳಿಕ ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆದ್ದಾಗ ಇಡೀ ಕರುನಾಡೇ ಸಂತಸಪಟ್ಟಿತ್ತು. ಅಷ್ಟೇ ಯಾಕೆ.. ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ತಂಡವೇ ಗೆದ್ದಂತೆ ಸಂಭ್ರಮಿಸಿದ್ರು. ಅಷ್ಟೇ ಅಲ್ಲ, ರಾಜ್ಯ ಸರ್ಕಾರವೇ ಶಕ್ತಿ ಸೌಧದ ಎದುರು RCB ಆಟಗಾರರನ್ನು ಗೌರವಿಸಿತ್ತು. ಬಳಿಕ ಚಿನ್ನಸ್ವಾಮಿ ಅಂಗಣದಲ್ಲಿ ನಡೆದಿದ್ದ RCB ವಿಜಯೋತ್ಸವದಲ್ಲಿ 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದರು . ಆದ್ರೆ RCB ಮ್ಯಾನೇಜ್ಮೆಂಟ್ ಮತ್ತು ಆಟಗಾರರು ಅಭಿಮಾನಿಗಳ ಜೀವಕ್ಕೆ ಬೆಲೆಯನ್ನೇ ನೀಡಲಿಲ್ಲ. ಕನಿಷ್ಠ ಪಕ್ಷ ಸಾವಿಗಿಡಾಗಿದ್ದ 11 ಮಂದಿಯ ಕುಟುಂಬಕ್ಕೆ ಯಾರು ಎಷ್ಟು ಪರಿಹಾರ ನೀಡಿದ್ರೂ ಎಂಬುದು ಗೊತ್ತಿಲ್ಲ. ಇನ್ನೊಂದೆಡೆ, ನಮ್ಮ ಬೆಂಗಳೂರಿನ ಹೆಮ್ಮೆಯ ಪ್ರತೀಕ ಚಿನ್ನಸ್ವಾಮಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನೇ ಸ್ಥಗಿತಗೊಳಿಸಿದ್ದ ಕುಖ್ಯಾತಿ ಅಂದಿನ ಕೆಎಸ್ಸಿಎ, RCB ಮ್ಯಾನೇಜ್ಮೆಂಟ್ಗೆ ಅಂಟಿಕೊಂಡಿದೆ.
ಇದೀಗ RCBಯನ್ನು ಬೆಂಬಲಿಸೋದು ಒಂದೇ ಒಂದು ಕಾರಣಕ್ಕೆ. ಅದು ವಿರಾಟ್ ಕೊಹ್ಲಿಗಾಗಿ. ಹಾಗೇ RCB ಒಂದು ಖಾಸಗಿ ಟೀಮ್. ಅವರಿಗೆ ಇಷ್ಟಬಂದ ಆಟಗಾರರನ್ನು ಆಯ್ಕೆ ಮಾಡೋದು ಅವರ ಇಷ್ಟ. ಆದ್ರೆ ಒಂದು ನೆನಪಿಟ್ಟುಕೊಳ್ಳಬೇಕು. ಕರ್ನಾಟಕದ ಆಟಗಾರರು ಇಲ್ಲದೆ ಇದ್ರೂ RCB ಅಭಿಮಾನಿಗಳು ತನು- ಮನ – ಧನದಿಂದ ಸಹಕರಿಸಿದ್ದಾರೆ ಎಂಬುದನ್ನು RCB ಮ್ಯಾನೇಜ್ಮೆಂಟ್ ಅರಿತುಕೊಳ್ಳಬೇಕು.
ಕೊನೆಯದಾಗಿ RCB ಇವತ್ತು ಐಪಿಎಲ್ನ ಅತ್ಯಂತ ಜನಪ್ರಿಯ ತಂಡವಾಗಿರಬಹುದು..ಹಾಗಂತ ಇದು ಕೇವಲ ಕೊಹ್ಲಿ ಅಥವಾ RCBಯ ಸ್ಟಾರ್ ಆಟಗಾರರಿಂದ ಆಗಿದ್ದಲ್ಲ. ಅದಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದು ಈ ಹಿಂದೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆಯಂತಹ ಆಟಗಾರರು. ಜೊತೆಗೆ ಕರ್ನಾಟಕ, ಕನ್ನಡಿಗರು, ಬೆಂಗಳೂರು ಎಂಬ ಬ್ರ್ಯಾಂಡ್ಗಳು ಎಂಬುದನ್ನು RCB ಮ್ಯಾನೇಜ್ಮೆಂಟ್ ಮರೆಯಬಾರದು.
ಇನ್ನು, ನಾವು ಇವತ್ತು ವಿಜಯ್ ಮಲ್ಯನನ್ನು ಮೋಸಗಾರ ಅಂತ ಕರೆಯಬಹುದು. ಆದ್ರೆ RCB ಎಂಬ ಬ್ರ್ಯಾಂಡ್ನ ಹಿಂದಿನ ಮಾಸ್ಟರ್ ಮೈಂಡ್ ಮಲ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅವತ್ತು ಅಷ್ಟೆಲ್ಲಾ ಶೋಕಿ, ಪ್ರಚಾರ, ದುಡ್ಡು ಖರ್ಚು ಮಾಡದೇ ಇರುತ್ತಿದ್ರೆ RCB ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.
ಒಟ್ಟಿನಲ್ಲಿ RCB ಮ್ಯಾನೇಜ್ಮೆಂಟ್ಗೆ ಒಂದಲ್ಲ ಒಂದು ದಿನ ಜ್ಞಾನೋದಯವಾಗುತ್ತದೆ. ಇನ್ನು, ಎಷ್ಟು ವರ್ಷ ವಿರಾಟ್ ಕೊಹ್ಲಿ ಹೆಸರನ್ನಿಟ್ಟುಕೊಂಡು ಬ್ರ್ಯಾಂಡ್ ಬಿಲ್ಡ್ ಮಾಡುತ್ತೆ ಅನ್ನೋದನ್ನು ನೋಡೋಣ. ಇಲ್ಲಿಯವರೆಗೆ RCB ಮ್ಯಾನೇಜ್ಮೆಂಟ್ನ ಮುಖದಲ್ಲಿ ಮಂದಹಾಸ ಇರಬಹುದು. ಆದ್ರೆ ಉಸಿರಾಡಲು ಕರ್ನಾಟಕ ಬೇಕು.. ಪ್ರೀತಿಸಲು ಅಭಿಮಾನಿಗಳ ಹೃದಯಬೇಕು. ಎದೆತಟ್ಟಿ ಮಾತನಾಡಲು ನಮ್ಮ ಬೆಂಗಳೂರು ಎಂಬ ಬ್ರ್ಯಾಂಡ್ ಬೇಕು. ಇದನ್ನು RCB ಮ್ಯಾನೇಜ್ಮೆಂಟ್ ಮರೆಯಬಾರದು.
ಸನತ್ ರೈ








