ಬೆಳಗಾವಿ: ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪಂಚಮಸಾಲಿ ಸಮುದಾಯದ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಕ್ಕೆ ತೀವ್ರ ಕ್ರೋಶ ವ್ಯಕ್ತವಾಗಿದೆ. ಈ ಕುರಿತು ಜಯಮೃತ್ಯುಂಜಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಮಾತನಾಡಿದ ಅವರು, ಲಾಠಿ ಚಾರ್ಜ್ ನಿಂದಾಗಿ 12 ಜನ ಪೊಲೀಸರು ಹಾಗೂ 6 ಜನ ಹೋರಾಟಗಾರರು ಗಾಯಗೊಂಡಿದ್ದಾರೆ. ಅವರನ್ನು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಂತಿಯಿಂದ ಹೋರಾಟ ಮಾಡುತ್ತಿದ್ದ ನಮ್ಮ ಮೇಲೆ ಈ ಸರ್ಕಾರ ಲಾಠಿ ಚಾರ್ಜ್ ನಡೆಸಿದೆ. ಇದಕ್ಕೆ ನಾವು 2028ಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ. ನಮಗೆ ಬೇಕಾದ ಸರ್ಕಾರವನ್ನು ನಾವೇ ರಚಿಸಿ, ಮೀಸಲಾತಿ ಪಡೆಯುತ್ತೇವೆ ಎಂದಿದ್ದಾರೆ.
ಪಂಚಮಸಾಲಿ ಹೋರಾಟ ಶಾಂತಿಯುತವಾಗಿತ್ತು, ಸ್ಥಳಕ್ಕೆ ಸಿಎಂ ಬರಬೇಕು ಅಂತಾ ಆಗ್ರಹ ಇತ್ತು. ಸ್ಥಳಕ್ಕೆ ಬಂದ ಸಚಿವರ ಮಾತು ಸಮಾಧಾನ ತರಲಿಲ್ಲ. ಹೀಗಾಗಿ ನಾವು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಹೊರಟೇವು. ಆಗ ಕಮಿಷನರ್ ಕುತಂತ್ರದಿಂದ ಲಾಠಿ ಚಾರ್ಜ್ ಮಾಡಿದರು. ಲಾಠಿ ಚಾರ್ಜ್‌ನಿಂದ ಬಹಳಷ್ಟು ಜನರಿಗೆ ಕೈಕಾಲು ಮುರಿದಿವೆ. ಮುಖ್ಯಮಂತ್ರಿಗಳೇ ಹೇಳಿ ಇದನ್ನು ಮಾಡಿಸಿದ್ದಾರಾ ಅನ್ನೋ ಅನುಮಾನ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಎಡಿಜಿಪಿ ಮತ್ತು ಕಮಿಷನರ್ ಅವರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.







