ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಸ್ಕ್ ಧರಿಸುವ ಅಗತ್ಯದ ಬಗ್ಗೆ ಮಹತ್ವದ ಸೂಚನೆ ನೀಡಿದ್ದಾರೆ. ಕೊರೊನಾ ಸೋಂಕುಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯದ ದೃಷ್ಟಿಯಿಂದ, ನಿರ್ದಿಷ್ಟ ಗುಂಪಿನ ಜನರು ಮಾಸ್ಕ್ ಧರಿಸುವುದು ತುಂಬಾ ಅಗತ್ಯವೆಂದು ಅವರು ತಿಳಿಸಿದ್ದಾರೆ.
ಬಾಣಂತಿಯರು, ಮಕ್ಕಳು, ಹಿರಿಯ ನಾಗರಿಕರು ಹಾಗೂ ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಮಾಸ್ಕ್ ಧರಿಸಬೇಕು. ಸೋಂಕಿನ ಹರಡುವಿಕೆಯನ್ನು ತಡೆಯುವಲ್ಲಿ ಇದು ಪ್ರಮುಖವಾಗುತ್ತದೆ, ಎಂದು ಸಚಿವರು ಹೇಳಿದರು.
ಅವರು ಜೊತೆಗೆ ಕೊರೊನಾ ತಪಾಸಣೆಯ ಬಗ್ಗೆ ಮಾತನಾಡುತ್ತಾ, ಮತ್ತೆ ಮೊದಲಿನ ಪದ್ಧತಿಯನ್ನೇ ನಾವು ಅನುಸರಿಸುತ್ತೇವೆ. ಯಾರಿಗೆ ಸೋಂಕಿನ ಲಕ್ಷಣಗಳು ಇವೆ ಆ ವ್ಯಕ್ತಿಗೆ ಮಾತ್ರ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ಎಲ್ಲರಿಗೂ ತಪಾಸಣೆ ಮಾಡುವುದಿಲ್ಲ ಎಂದು ವಿವರಿಸಿದರು.
ವಿದೇಶದಿಂದ ಭಾರತಕ್ಕೆ ಆಗಮಿಸುವವರಿಗೆ ಕುರಿತಂತೆ, ಅವರಿಗೆ ಈಗ ಯಾವುದೇ ಕೊರೊನಾ ಟೆಸ್ಟಿಂಗ್ ಮಾಡುವ ಯೋಜನೆ ಇಲ್ಲ. ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಂದ ನಂತರ ಲಸಿಕೆ ನೀಡುವ ಕ್ರಮ ಆರಂಭಿಸುತ್ತೇವೆ. ಅದುವರೆಗೆ ನಾವು ಸನ್ನದ್ದರಾಗಿ ಕಾಯುತ್ತೇವೆ ಎಂದು ಹೇಳಿದರು.
ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ ತಯಾರಿ ನಡೆದಿದೆ. ರಾಜ್ಯದ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಶಿಸ್ತು ಮತ್ತು ಜಾಗೃತಿ ಪಾಲಿಸಿದರೆ ಮಾತ್ರ ಈ ಅವಧಿಯನ್ನು ನಿಭಾಯಿಸಬಹುದು, ಎಂದು ಜನತೆಗೆ ಮನವಿ ಮಾಡಿದರು.








