Wedding anniversary – ಜೂನಿಯರ್ NTR ದಂಪತಿಗೆ 11ನೇ ವರ್ಷದ ವಿವಾಹ ವಾರ್ಷಿಕೋತ್ಸವ….
ಸೌತ್ ಚಿತ್ರರಂಗದಲ್ಲಿ ಯಂಗ್ ಟೈಗರ್ ಅಂತಾನೇ ಗುರುತಿಸಿಕೊಂಡಿರುವ NTR, RRR ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಇಂದು ಅಂದರೆ ಮೇ 5 ರಂದು ಜೂನಿಯರ್ NTR ಮತ್ತು ಪತ್ನಿ ಲಕ್ಷ್ಮಿ ಪ್ರಣತಿ ಅವರ ವಿವಾಹ ವಾರ್ಷಿಕೋತ್ಸವ. ಹಾಗಾಗಿ NTR ದಂಪತಿಗಳ ಕುರಿತ ವಿಶೇಷ ಮಾಹಿತಿ ನಿಮಗಾಗಿ…
ಜೂನಿಯರ್ ಎನ್ಟಿಆರ್ ಮತ್ತು ಪತ್ನಿ ಪ್ರಣತಿ ಇಂದು ತಮ್ಮ 11 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಾರಕ್ ಮತ್ತು ಪ್ರಣತಿ ಟಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ಜೋಡಿಗಳಲ್ಲಿ ಒಬ್ಬರು. ತೆಲುಗು ಚಿತ್ರರಂಗದಲ್ಲಿ ಪರ್ಫೆಕ್ಟ್ ಮ್ಯಾಚ್ ಎಂದು ಹೆಸರುವಾಸಿಯಾಗಿರುವ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. 11 ವರ್ಷಗಳ ಹಿಂದೆ ಇದೇ ದಿನ ಮೇ 5, 2011 ರಂದು ಕುಟುಂಬ ಮತ್ತು ಸ್ನೇಹಿತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಜೂ ಎನ್ ಟಿ ಆರ್ ವಯಸ್ಸಿನಲ್ಲಿ ತಮಗಿಂತ 10 ವರ್ಷ ಚಿಕ್ಕವರಾದ ಲಕ್ಷ್ಮಿ ಪ್ರಣತಿಯನ್ನ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಲಕ್ಷ್ಮಿ ಅವರು ಪ್ರಸಿದ್ಧ ತೆಲುಗು ಸುದ್ದಿ ವಾಹಿನಿ “ಸ್ಟುಡಿಯೋ ಎನ್” ನ ಮಾಲೀಕರಾದ ಲಕ್ಷ್ಮಿ ನಾರ್ನೆ ಶ್ರೀನಿವಾಸ ರಾವ್ ಅವರ ಪುತ್ರಿ.
ಜೂನಿಯರ್ ಎನ್ಟಿಆರ್ ಮತ್ತು ಲಕ್ಷ್ಮಿ ಮದುವೆ ಅದ್ದೂರಿಯಾಗಿ ನಡೆದಿತ್ತು. ಇಬ್ಬರಿಬ್ಬರ ಮದುವೆಗೆ ಸಂಬಂಧಿಸಿದ ಹಲವು ಕಥೆಗಳು ಚಿತ್ರರಂಗದಲ್ಲಿ ಹರಿದಾಡುತ್ತಿರುತ್ತವೆ. ಸುಮಾರು 100 ಕೋಟಿ ರೂಪಾಯಿ ಖರ್ಚು ಮಾಡಿ ಮದುವೆ ಏರ್ಪಡಿಸಲಾಗಿತ್ತು. ವಧು ಲಕ್ಷ್ಮಿ ಪ್ರಣತಿ ಧರಿಸಿದ್ದ ಸೀರೆಯ ಮೌಲ್ಯವೇ 1 ಕೋಟಿ ಎಂದು ಹೇಳಲಾಗುತ್ತದೆ. ಮದುವೆಗೆ ಆಗಮಿಸಿದ್ದ ಅತಿಥಿಗಳ ಸಂಖ್ಯೆ ಬರೊಬ್ಬರಿ 15,000. ಇವರಿಗಾಗಿಯೇ ವಿಶೇಷ ರೈಲು ಓಡಿಸಲಾಗಿತ್ತು.
ಜೂನಿಯರ್ ಎನ್ಟಿಆರ್ ಮತ್ತು ಲಕ್ಷ್ಮಿ ಮದುವೆಗೂ ಮುನ್ನ ಸಾಕಷ್ಟು ವಿವಾದಗಳು ಭುಗಿಲೆದ್ದಿದ್ದವು. NTR 2010 ರಲ್ಲಿ ಲಕ್ಷ್ಮಿ ಅವರನ್ನ ಮದುವೆಯಾಗಬೇಕಾಗಿತ್ತು. ಆ ಸಮಯದಲ್ಲಿ ಲಕ್ಷ್ಮಿಗೆ ಕೇವಲ 17 ವರ್ಷ. ಈ ಕಾರಣಕ್ಕಾಗಿ ನಟನ ವಿರುದ್ಧ ಬಾಲ್ಯವಿವಾಹ ಕಾಯ್ದೆಯಡಿ ಪ್ರಕರಣ ಕೂಡ ದಾಖಲಾಗಿತ್ತು. ನಂತರ 1 ವರ್ಷ ಕಾದು 2011 ರಲ್ಲಿ ಇಬ್ಬರೂ ಮದುವೆಯಾದರು. ಆ ಸಮಯದಲ್ಲಿ ಲಕ್ಷ್ಮಿಗೆ 18 ವರ್ಷ ವಯಸ್ಸಾಗಿತ್ತು.
ದಂಪತಿಗಳಿಗೆ ಅಭಯ್ ರಾಮ್ ಮತ್ತು ಭಾರ್ಗವ್ ರಾಮ್ ಎಂಬ ಇಬ್ಬರು ಮಕ್ಕಳಿದ್ದಾರೆ.