ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧಿಸುತ್ತಿದ್ದಂತೆಯೇ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಮಾಡಿರುವ ಸಚಿವರು, ಕೊಲೆ ಆರೋಪಿಯು ಬಜರಂಗದಳದ ಹಿನ್ನೆಲೆ ಉಳ್ಳವನಾಗಿರುವುದರಿಂದ ಬಿಜೆಪಿ ನಾಯಕರ ಮೌನವನ್ನು ಪ್ರಶ್ನಿಸಿದ್ದಾರೆ. ಸಾಮಾನ್ಯವಾಗಿ ಎಲ್ಲಾದರೂ ಸಾವು ಸಂಭವಿಸಿದರೆ, ಹೆಣ ಬಿದ್ದರೆ ರಣಹದ್ದುಗಳಂತೆ ಹಾರಿ ಬರುವ ಬಿಜೆಪಿ ನಾಯಕರು, ತಮ್ಮದೇ ಸಿದ್ಧಾಂತದ ಕಾರ್ಯಕರ್ತ ಕೊಲೆ ಮಾಡಿದಾಗ, ಸಮಾಜದ ಸಾಮರಸ್ಯ ಕದಡುವ ಈ ಕುಕೃತ್ಯದ ಬಗ್ಗೆ ಏನು ಉತ್ತರ ನೀಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಶಾಖೆಯಲ್ಲಿ ಕೊಲೆ ಪಾಠ ಹೇಳಿಕೊಡುತ್ತಾರೆಯೇ?
ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಪ್ರಿಯಾಂಕ್ ಖರ್ಗೆ, ಸಂಘ ಪರಿವಾರದ ಭಯೋತ್ಪಾದಕ ಮುಖಗಳು ಮತ್ತೊಮ್ಮೆ ಜಗಜ್ಜಾಹೀರಾಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶಾಖೆಗಳಲ್ಲಿ ಇಂತಹ ಪಾತಕ ಪಾಠಗಳನ್ನು ಹೇಳಿಕೊಡುವುದೇ ಸಂಘ ಪರಿವಾರದ ಸಂಸ್ಕಾರವೇ? ಅಲ್ಲಿ ಸಂಗ್ರಹವಾಗುವ ಗುರುದಕ್ಷಿಣೆಯ ಹಣವು ಇಂತಹ ಸಮಾಜಘಾತುಕ ಕೃತ್ಯಗಳಿಗೆ ಮತ್ತು ಅಮಾಯಕರ ರಕ್ತ ಚೆಲ್ಲಲು ಬಳಕೆಯಾಗುತ್ತಿದೆಯೇ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಸಚಿವರು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಗಣೇಶ್ ಗೌಡ ಅವರ ಕುಟುಂಬ ಸದಸ್ಯರೊಂದಿಗೆ ನಾನೂ ಸಮಾನ ದುಃಖಿತನಾಗಿದ್ದೇನೆ ಎಂದು ಸಾಂತ್ವನ ಹೇಳಿದ್ದಾರೆ. ಇದೇ ವೇಳೆ, ನಮ್ಮ ಸರ್ಕಾರವು ಕೊಲೆಗಡುಕರಿಗೆ ಕಾನೂನಿನ ಅಡಿಯಲ್ಲಿ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ ಗಣೇಶ್ ಅವರ ಸಾವಿಗೆ ಕಟ್ಟುನಿಟ್ಟಿನ ನ್ಯಾಯ ದೊರಕಿಸಿಕೊಡಲಿದೆ ಎಂದು ಭರವಸೆ ನೀಡಿದ್ದಾರೆ.
ಗಣೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಜರಂಗದಳ ಕಾರ್ಯಕರ್ತನ ಬಂಧನವಾಗಿರುವುದು ಇದೀಗ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ರಾಜಕೀಯವಾಗಿ ಮತ್ತಷ್ಟು ಕಾವು ಪಡೆದುಕೊಳ್ಳುವ ಸಾಧ್ಯತೆಯಿದೆ.








