ಬೆಂಗಳೂರು: ಅಸಹಜ ಲೈಂಗಿಕ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ವಿಪ ಸದಸ್ಯ ಸೂರಜ್ ರೇವಣ್ಣ ಅವರಿಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಹೀಗಾಗಿ ಜೈಲಿನಿಂದ ಹೊರ ಬಂದ ಸೂರಜ್, ಈ ಕುರಿತು ಮಾತನಾಡಿದ್ದಾರೆ.
ನಮ್ಮ ಕುಟುಂಬ ಹಾಗೂ ನನ್ನ ವಿರುದ್ಧ ಷಡ್ಯಂತ್ರ ಮಾಡಿ ತೇಜೋವಧೆ ಮಾಡುವುದಕ್ಕಾಗಿ ಈ ರೀತಿ ವಿರೋಧಿಗಳು ಮಾಡಿದ್ದಾರೆ. ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಆದಷ್ಟು ಬೇಗ ಹೊರಬರಲಿದೆ ಎಂದು ಹೇಳಿದ್ದಾರೆ.
ಎರಡು ಪ್ರಕರಣದಲ್ಲಿ ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara) ಇಂದು ಸೂರಜ್ ರೇವಣ್ಣ (Suraj Revanna) ಬಿಡುಗಡೆಯಾಗಿದ್ದಾರೆ. ಹಾಸನದ ರಾಜಕಾರಣ ಏನಿದೆ ಅದು ಆಗಿಯೇ ಆಗುತ್ತದೆ. ಸತ್ಯವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಕುತಂತ್ರ ಮಾಡಿ ನಮ್ಮ ಕುಟುಂಬ ಮುಗಿಸಲು ಹೊರಟಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ಎರಡ್ಮೂರು ದಿನಗಳಲ್ಲಿ ಸ್ಪಷ್ಟನೆ ನೀಡುತ್ತೇನೆ.
ಎಲ್ಲಾ ತನಿಖೆಗೂ ನಾನು ಸಹಕಾರ ಕೊಟ್ಟಿದ್ದೇನೆ. ಕಾನೂನಿನ ಮೇಲೆ ನನಗೆ ವಿಶ್ವಾಸ ಇದೆ. ಹೆದರಿ ಓಡಿ ಹೋಗುವುದಿಲ್ಲ. ಶಿವಕುಮಾರ್ ನನ್ನ ಕಾರು ಚಾಲಕ ಅಲ್ಲ. ನನ್ನ ಕಾರು ಚಾಲಕ ಲೋಕೇಶ್ ಎಂದು ಹೇಳಿದ್ದಾರೆ.
ಅಸಹಜ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆ ನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದೂರು ದಾಖಲಾಗಿವೆ.








